ಬಿಜೆಪಿಯಿಂದ ಜಿಲ್ಲೆಯಲ್ಲಿ 60 ಸಾವಿರಕ್ಕೂ ಅಧಿಕ ಧ್ವಜಗಳ ವಿತರಣೆ

ಕಾರವಾರ: ಭಾರತವು ಸ್ವಾತಂತ್ರ‍್ಯ ಗೊಂಡು 75 ವರ್ಷಗಳನ್ನು ಪೂರೈಸಿರುವ ಹಿನ್ನಲೆ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನವನ್ನು ಸರಕಾರ ಹಮ್ಮಿಕೊಂಡಿದೆ. ಅಭಿಯಾನಕ್ಕಾಗಿ ಭಾರತೀಯ ಜನತಾ ಪಕ್ಷವು ಇದುವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 60 ಸಾವಿರಕ್ಕೂ ಹೆಚ್ಚಿನ ಧ್ವಜಗಳನ್ನು ವಿತರಣೆ ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಹರ ಘರ್ ತಿರಂಗಾ ಅಭಿಯಾನದ ನಿಮಿತ್ತ ಉತ್ತರ ಕನ್ನಡದಲ್ಲಿರುವ 3.44 ಲಕ್ಷ ಮನೆಗಳ ಮೇಲೆ ಆಗಸ್ಟ್ 13 ರಿಂದ 15 ರವರೆಗೆ ತ್ರಿವರ್ಣ ಧ್ವಜ ಹಾರಿಸಲು ಬಿಜೆಪಿ ಗುರಿಯನ್ನು ಹೊಂದಿದೆ. ಇದರ ಹಿನ್ನೆಲೆ ಆ.10 ರಿಂದ ಮೂರು ದಿನಗಳ ಕಾಲ ಪ್ರತಿ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ.

ಈಗಾಗಲೇ ವಿವಿಧ ಸಂಘಟನೆಗಳಿಂದ, ಸರಕಾರದಿಂದ ಧ್ವಜ ವಿತರಿಸುವ ಕಾರ್ಯ ನಡೆದಿದೆ. ಯಾರಿಗಾದರೂ ದೊರೆಯದಿದ್ದಲ್ಲಿ ಅಂತಹ ಮನೆಗಳಿಗೂ ತಲುಪಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ. ಈಗಾಗಲೇ 60 ಸಾವಿರಕ್ಕಿಂತ ಹೆಚ್ಚು ಧ್ವಜಗಳನ್ನು ಬಿಜೆಪಿ ಸಂಘಟನೆಯ ಮೂಲಕ ಜನರಿಗೆ ನೀಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಯುವಮೋರ್ಚಾ ವತಿಯಿಂದ ಪ್ರತಿ ಮಂಡಲದಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಹಳಿಯಾಳ ಹಾಗೂ ಮುಂಡಗೋಡ ಭಾಗದಲ್ಲಿ ರೈತ ಮೋರ್ಚಾದವರು ಟ್ರಾಕ್ಟರ್ ಹಾಗೂ ಚಕ್ಕಡಿ ಗಾಡಿಗಳ ಮೂಲಕ ರ‍್ಯಾಲಿ ನಡೆಸಿ ಜಾಗೃತಿ ಮೂಡಿಸಲಿದ್ದಾರೆ. ಈ ಮೂಲಕ ಪ್ರತಿ ಮನೆಯಲ್ಲಿಯೂ ರಾಷ್ಟçಧ್ವಜ ಹಾರಾಡಲಿದ್ದು ಪ್ರಧಾನಿ ಮೋದಿಯವರ ಕರೆಗೆ ಎಲ್ಲರೂ ಸ್ಪಂದಿಸಲಿದ್ದಾರೆ ಎಂದರು.