ಕಾರವಾರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಭಾರತೀಯ ತಟ ರಕ್ಷಕ ಪಡೆಯಿಂದ ಆಯೋಜಿಸಲಾಗಿರುವ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬುಧವಾರ ಬೆಳಿಗ್ಗೆ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಭಾರತೀಯ ಕೋಸ್ಟ್ ಗಾರ್ಡ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ನೌಕಾಪಡೆಯ ಎನ್.ಸಿ.ಸಿ. ಕೆಡೆಟ್‌ಗಳು ಹಾಗೂ ಭೂಸೇನಾ ಎನ್.ಸಿ.ಸಿ. ಕೆಡೆಟ್‌ಗಳು ಸೇರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ ದೇಶ ಸೇವೆಯಲ್ಲಿ ಅನೇಕ ಅಧಿಕಾರಿಗಳು ತೊಡಗಿಕೊಂಡಿದ್ದಾರೆ. ಇಂಥ ಕಾರ್ಯಕ್ರಮದಲ್ಲಿ ಎನ್.ಸಿ.ಸಿ. ಕೆಡೆಟ್‌ಗಳು ಪಾಲ್ಗೊಳ್ಳಬೇಕು. ಹೆಚ್ಚಿನ ವಿದ್ಯಾರ್ಥಿಗಳು ಎನ್.ಸಿ.ಸಿ. ಯಲ್ಲಿ ತೊಡಗಿಕೊಳ್ಳಬೇಕು. ವಿದ್ಯಾರ್ಥಿಗಳು ಸಮಾಜಕ್ಕೆ ಏನಾದರೂ ನೀಡಬೇಕು ಎನ್ನುವ ಚಿಂತನೆ ಮೈಗೂಡಿಸಿಕೊಳ್ಳಬೇಕು. ಇದೊಂದು ಅವಕಾಶವಾಗಿದ್ದು ಇಲ್ಲಿಂದ ಮುಂದೆ ಹೆಚ್ಚಿನದನ್ನು ಕಲಿಯಬಹುದು. ದೇಶ ಪ್ರೇಮ ಎನ್ನುವುದು ಜವಾಬ್ದಾರಿಯುತ ಚಿಂತನೆಯಾಗಿದ್ದು ಸಣ್ಣ ಚಿಂತನೆಯಿಂದ ದೇಶವನ್ನು ಅಭಿವೃದ್ಧಿಯತ್ತ ಒಯ್ಯಬಹುದು ಎಂದರು.
ಸ್ಟೇಷನ್ ಕಮಾಂಡರ್ ಸುರೇಶ ಕಪೂರ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು. ರ‍್ಯಾಲಿಯು ಕಾರವಾರದಿಂದ ಅಂಕೋಲಾಗೆ ತೆರಳಲಿದ್ದು ಅಲ್ಲಿನ ಸೂರ್ವೆಗೆ ತೆರಳಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸಲಾಗುವುದು. ಬಳಿಕ ಎಸ್,ಪಿ. ಕಚೇರಿಗೆ ಮರಳಿ ರ‍್ಯಾಲಿ ಕೊನೆಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.