ಸಾವಿರಾರು ಕಿ.ಮೀ. ಬೈಕ್‌ ರ್ಯಾಲಿಯ ಮೂಲಕ ಸೈನಿಕರ ಕಲ್ಯಾಣ ನಿಧಿಗಾಗಿ ಜಾಗೃತಿ ಮೂಡಿಸುತ್ತಿರುವ ಯುವಕ

ಸಾಗರ ತಾಲೂಕಿನ ನಿಟ್ಟೂರಿನ ಯುವಕ ಕಳೆದ ನಾಲ್ಕು ವರ್ಷಗಳಿಂದ ಯಾರ ಸಹಕಾರವೂ ಇಲ್ಲದೇ ತನ್ನದೇ ಸ್ವಂತ ಖರ್ಚಿನಲ್ಲಿ ಕರ್ನಾಟಕದಾದ್ಯಂತ ಸಾವಿರಾರು ಕಿ.ಮೀ ಬೈಕ್‌ ರ್ಯಾಲಿಯ ಮೂಲಕ ಸಾರ್ವಜನಿಕರನ್ನು ಪ್ರೇರೇಪಿಸುತ್ತಾ, ಸೈನಿಕರ ಕಲ್ಯಾಣ ನಿಧಿಗಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ಮೂಲತಃ ಸಾಗರ ತಾಲೂಕಿನ ನಿಟ್ಟೂರಿನವರಾದ ಆದಿತ್ಯ ಶಂಕರ್‌ ಎನ್ನುವ ಯುವಕ, ಪ್ರಸ್ತುತ ಉಮ್ಮಚಗಿಯ ಬಳಿ ಪ್ರಗತಿ ವಿದ್ಯಾಲಯ ಭರತಹಳ್ಳಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು 2021 ರಿಂದ ಪ್ರತೀ ವರ್ಷ ಸೈನಿಕರ ಕಲ್ಯಾಣ ನಿಧಿಗಾಗಿ, ಸಾರ್ವಜನಿಕರನ್ನು ಪ್ರೇರೇಪಿಸುವ ಉದ್ದೇಶದಿಂದ ಕರ್ನಾಟಕದಾದ್ಯಂತ ಸಾವಿರಾರು ಕಿ.ಮೀ ಬೈಕ್‌ ರ್ಯಾಲಿಯ ಮೂಲಕ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.

ವಿಶೇಷವೆಂದರೆ, ಇವರು ತಮ್ಮದೇ ಸ್ವಂತ ಖರ್ಚಿನಲ್ಲಿ ಬೈಕ್‌ ರ್ಯಾಲಿ ಮಾಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ, ಇವರು ಜನರಿಂದ ಒಂದು ಪೈಸೆಯನ್ನೂ ಸಹ ತೆಗೆದುಕೊಳ್ಳುವುದಿಲ್ಲ. ಸೈನಿಕರ ಕಲ್ಯಾಣ ನಿಧಿಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗೆ ತಮಗೆ ತೋಚಿದಷ್ಟು ಹಣವನ್ನು ಹಾಕುವಂತೆ ಜನರನ್ನು ಮನವೊಲಿಸುತ್ತಾರೆ. ಅದಕ್ಕೆ ಸಂಬಂಧಿಸಿದ ಸೈನಿಕರ ಕಲ್ಯಾಣ ನಿಧಿಯ ಅಕೌಂಟ್ ವಿವರ ಇರುವ ಕರ ಪತ್ರ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಯಾವುದೇ ದೇಣಿಗೆ ನೀಡಿದರೂ ಅದು ನೇರವಾಗಿ ಸೈನಿಕರ ಕಲ್ಯಾನ ನಿಧಿಗೇ ಸೇರಬೇಕು ಎನ್ನುವ ಉದ್ದೇಶ ಅವರದ್ದು. ಹೀಗೆ ಬೈಕ್‌ ರ್ಯಾಲಿಯ ಮೂಲಕ ಕಳೆದ ಕೆಲ ವರ್ಷಗಳಿಂದ ಒಂದೊಂದು ಪ್ರದೇಶಗಳಿಗೆ ತೆರಳಿ ಜಾಗೃತಿ ಅಭಿಯಾನ ನಡೆಸುತ್ತಿದ್ದು, ಈ ಬಾರಿ ದಕ್ಷಿಣ ಕನ್ನಡ, ಉಡುಪಿ, ಆಗುಂಬೆ, ತೀರ್ಥಹಳ್ಳಿ, ಸಾಗರಗಳಿಗೆ ತೆರಳಿ ಅಲ್ಲಿ ಜಾಗೃತಿ ಅಭಿಯಾನ ನಡೆಸಿ ಯಶಸ್ವಿಯಾಗಿದ್ದಾರೆ.

ಅಷ್ಟೇ ಅಲ್ಲ, ಇವರು ಕೇವಲ ಇತರರಿಗೆ ಸೈನಿಕರಿಗೆ ಧನ ಸಹಾಯ ಮಾಡಿ ಎಂದಷ್ಟೇ ಹೇಳಿ ಸುಮ್ಮನಿಲ್ಲ. ತಾವೂ ಕೂಡ ತಮ್ಮಿಂದಾದ ಧನ ಸಹಾಯ ಮಾಡಿದ್ದಾರೆ.

ಒಟ್ಟಿನಲ್ಲಿ ಯಾರ ಸಹಾಯ ಸಹಕಾರ ಅಪೇಕ್ಷಿಸದೇ, ಯಾವುದೇ ಪ್ರಚಾರ ಬಯಸದೇ, ಸೈನಿಕರಿಗಾಗಿ ತಮ್ಮಿಂದಾದ ಸಹಾಯ ಮಾಡುತ್ತಿರುವ ಆದಿತ್ಯ ಶಂಕರ್‌, ಸೈನಕರ ಸೇವೆ ಎಲ್ಲಕ್ಕಿಂತ ಮಿಗಿಲು, ಅವರು ನಮ್ಮ ದೇಶದ ಜೊತೆಗೆ ನಮ್ಮನ್ನು ಕಾಯುತ್ತಾ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಸದಾ ಸೇವೆ ಮಾಡುತ್ತಿರುತ್ತಾರೆ. ಅಂತಹವರಿಗೆ ಇದು ನನ್ನಿಂದಾಗುವ ಅಳಿಲು ಸೇವೆ. ಇದರ ಕುರಿತಾಗಿ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎಂದು ಅಬಿಮಾನದಿಂದ ಹೇಳುತ್ತಾರೆ.