ಲೋಕಸಭೆ ಚುನಾವಣೆ(Lok Sabha Election 2024) ರಂಗೇರಿದ್ದು, ವಾರಾಣಸಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಲಭೈರವನಿಗೆ ಪೂಜೆ ಸಲ್ಲಿಸಿದ ಬಳಿಕ ನೇರವಾಗಿ ವಾರಾಣಸಿಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರಧಾನಿ, ನಾಮಪತ್ರ ಸಲ್ಲಿಸಿದರು. ಪ್ರಧಾನಿ ಸತತ 3ನೇ ಅವಧಿಗೆ ವಾರಣಾಸಿ(Varanasi)ಯಿಂದಲೇ ಸ್ಪರ್ಧಿಸುತ್ತಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಮಂಗಳವಾರ ಬೆಳಗ್ಗೆ 11:40ಕ್ಕೆ ಪ್ರಧಾನಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ʼಅಭಿಜಿತ್ ಮಹೂರ್ತವಾಗಿದೆ. ಇದು ʼಆನಂದ ಯೋಗದ ಅಡಿಯಲ್ಲಿ ಬರುತ್ತಿದ್ದು ಅತ್ಯಂತ ಮಂಗಳಕರ ಅವಧಿ ಎನ್ನಲಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಜೊತೆಗಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನವೇ ಅವರು ಸೋಮವಾರ ರೋಡ್ ಶೋ ನಡೆಸಿ ಜನರ ಗಮನ ಸೆಳೆದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರ ಸಚಿವರು, ಬಿಜೆಪಿ ನಾಯಕರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ 25ಕ್ಕೂ ಅಧಿಕ ನಾಯಕರು ಪ್ರಧಾನಿ ಮೋದಿಗೆ ಸಾಥ್ ಕೊಟ್ಟರು.
ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಗೂ ಮೊದಲು ಬೆಳಗ್ಗೆ 10.45ಕ್ಕೆ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಮೋದಿ ಅವರು ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಜತೆ ಮಹತ್ವದ ಸಭೆ ನಡೆಸಿದ್ದು, ಲೋಕಸಭೆ ಚುನಾವಣೆ ಗೆಲುವು, ಪಕ್ಷ ಸಂಘಟನೆ ಸೇರಿ ಹಲವು ವಿಷಯಗಳ ಕುರಿತು ನಾಯಕರು ಹಾಗೂ ಕಾರ್ಯಕರ್ತರ ಜತೆ ಮೋದಿ ಚರ್ಚಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ದಿನ ಅಂದರೆ ಸೋಮವಾರ ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದ್ವಾರದಿಂದ ಅದ್ಧೂರಿ ರೋಡ್ ಶೋ ನಡೆಸಿದರು. ಸರಿಸುಮಾರು 5 ಕಿಮೀ ವರೆಗೆ ರೋಡ್ ಶೋನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೇ ಇತರ ಪ್ರಮುಖರು ಭಾಗವಹಿಸಲಿದ್ದರು. ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಿದರು. 5,000 ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದು, 100 ಪಾಯಿಂಟ್‌ಗಳಲ್ಲಿ ಪುಷ್ಪವೃಷ್ಟಿ ಮಾಡಲಾಯಿತು. ಮುಸ್ಲಿಂ ಸಮುದಾಯದವರೂ ಮೋದಿಗೆ ವಿಶೇಷ ಸ್ವಾಗತ ಕೋರಿದ್ದರು. ರೋಡ್ ಶೋ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.