ಬೆಂಗಳೂರು, ಮೇ 14: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋದಲ್ಲಿದ್ದ ಸಂತ್ರಸ್ತೆ ಅಪಹಿರಸಿದ ಆರೋಪದ ಮೇಲೆ ಜೈಲು ಸೇರಿದ್ದ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಗೆ ಸೋಮವಾರ (ಮೇ. 13) ಷರತ್ತು ಬದ್ಧ ಜಾಮೀನು ಮಂಜೂರು ಆಗಿದ್ದು, ಇಂದು (ಮೇ 14) ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹೆಚ್ಡಿ ರೇವಣ್ಣ ಮಂಗಳವಾರ ಬಿಡುಗಡೆಯಾಗುತ್ತಾರೆ ಎಂಬ ವಿಚಾರ ತಿಳಿದಿದ್ದ ಅವರ ಬೆಂಬಲಿಗರು ಮತ್ತು ನೂರಾರು ಜೆಡಿಎಸ್ ಕಾರ್ಯಕರ್ತರು ಪರಪ್ಪನ ಅಗ್ರಹಾರ ಕಾರಾಗೃಹದ ಮುಂದೆ ಜಮಾಯಿಸಿದ್ದರು. ಹೆಚ್ಡಿ ರೇವಣ್ಣ ಅವರು ಬಿಡುಗಡೆಯಾಗುತ್ತಿದ್ದಂತೆ, ಅವರ ಅಭಿಮಾನಿಗಳು ಜಯ ಘೋಷಣೆ ಹಾಕಿ ಸಂಭ್ರಮಿಸಿದರು. ಕಾರಾಗೃಹದ ಮುಂದೆ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಬೇಕಾಯ್ತು.
ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ನ್ಯಾಯಾಲಯ ಸೋಮವಾರವೇ ಷರತ್ತು ಬದ್ಧ ಜಾಮೀನು ನೀಡಿತ್ತು. ಜಾಮೀನು ನೀಡುವಷ್ಟರಲ್ಲಿ ನ್ಯಾಯಾಲಯದ ಸಮಯ ಆಗಿದ್ದರಿಂದ ಕೋರ್ಟ್ ಪ್ರಕ್ರಿಯೆಗಳು ಇಂದಿಗೆ (ಮೇ 14) ಮುಂದೂಡಲಾಗಿತ್ತು. ಹೀಗಾಗಿ ಹೆಚ್ಡಿ ರೇವಣ್ಣ ಸೋಮವಾರದ ರಾತ್ರಿಯನ್ನು ಜೈಲಿನಲ್ಲೇ ಕಳೆದರು. ಮಂಗಳವಾರ ಕೋರ್ಟ್ ಪ್ರಕ್ರಿಯೆಗಳು ಮುಗಿದಿದ್ದು, ಇದೀಗ ಜೈಲಿಂದ ಬಿಡುಗಡೆಯಾಗಿದ್ದಾರೆ.