ನವದೆಹಲಿ, ಏಪ್ರಿಲ್ 8: ರಾಜ್ಯದ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿರುವ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಾರ್ಚ್ 22ರಂದು ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿತ್ತು.
ಸದ್ಯ ಯಾವುದೇ ಶಾಲೆಗಳು ಕೂಡ ಫಲಿತಾಂಶ ಪ್ರಕಟಿಸಬಾರದು. ಮುಂದಿನ ಆದೇಶದವರೆಗೆ ಕಾಯಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಮಾರ್ಚ್ನಲ್ಲಿ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿ ಆದೇಶ ನೀಡಿದ್ದ ಹೈಕೋರ್ಟ್, ಸ್ಥಗಿತಗೊಂಡಿರುವ ಪರೀಕ್ಷೆ ಮುಂದುವರಿಸಲು ಸೂಚಿಸಿತ್ತು. ಅದರಂತೆ ಬಳಿಕ ಶಾಲೆಗಳು ಪರೀಕ್ಷೆ ನಡೆಸಿದ್ದವು. ಇದೀಗ ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಬಂದಿದೆ.