ಅಂಕೋಲಾ, ಮಾರ್ಚ್ 20 : ಎನ್.ಎಸ್.ಎಸ್ ತರಬೇತಿ ಪಡೆದ ನಂತರ ಮರೆಯದೇ ರಾಷ್ಟ್ರದ ಹಿತ, ರಾಷ್ಟ್ರ ಪ್ರೇಮ, ಶಿಸ್ತು, ಹೊಸತನಕ್ಕಾಗಿ ಬಳಸಬೇಕು. ನಡೆಯುವ ನಡೆ, ಆಡುವ ಮಾತು ಸ್ಪಷ್ಟವಾಗಿದ್ದು ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು. ಶಿಬಿರದ ಪಾಠ ಜೀವನದ ಕೈಗನ್ನಡಿಯಾಗಬೇಕು ಹಾಗೂ ಸಾರ್ಥಕವಾಗಬೇಕು, ಜೀವನದ ಮಟ್ಟವನ್ನು ಎತ್ತರಿಸಿಕೊಂಡು ಸತ್ಪ್ರಜೆ ಆಗಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ದೇವರಾಯ ನಾಯಕ ಹೇಳಿದರು.
ಅವರು ಕೆ.ಎಲ್. ಇ ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಾರ್ಷಿಕ ಶಿಬಿರದ 2024ನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ನಿಮಿಷದ ನಿರ್ಣಯ, ವಿಚಾರ ಬದುಕನ್ನು ಬದಲಾಯಿಸಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಮಂಜುನಾಥ ನಾಯಕ ಮುಂದಿನ ಜೀವನ ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆ, ಅನುಕಂಪವನ್ನು ಬೆಳೆಸಿಕೊಂಡು ಸಂಪೂರ್ಣ ಜೀವನ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ ಶಿಬಿರ, ಶಿಬಿರಾರ್ಥಿಯಲ್ಲಿ ಸಹಕಾರ ಮನೋಭಾವ, ಸ್ನೇಹಮಯ ವರ್ತನೆ ಜೊತೆಗೆ ವ್ಯಕ್ತಿತ್ವ ಬೆಳೆಸಬೇಕು ಹಾಗೂ ನಮ್ಮ ಯೋಚನಾ ಶಕ್ತಿಯನ್ನು ಬದಲಾಯಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಜು ಭಾಟಿಯಾ ಸಂಗಡಿಗರು ಪ್ರಾರ್ಥಿಸಿದರು. ಶಿಬಿರದ ಸಮನ್ವಯಾಧಿಕಾರಿಗಳಾದ ಉಪನ್ಯಾಸಕ ರಾಘವೇಂದ್ರ ಅಂಕೋಲೆಕರ ಸ್ವಾಗತಿಸಿದರು. ಕಾರ್ಯದರ್ಶಿ ಪ್ರತಿಕ ನಾಯಕ ವಂದಿಸಿದರು. ಸುಷ್ಮಶ್ರೀ ಶೆಟ್ಟಿ ನಿರೂಪಿಸಿದರು.
ವೇದಿಕೆಯಲ್ಲಿ ಉಪನ್ಯಾಸಕ ಮಂಜುನಾಥ ಇಟಗಿ ಉಪಸ್ಥಿತರಿದ್ದರು. 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.