ಜಗ್ಗಿ ವಾಸುದೇವ್‌ಗೆ ಮೆದುಳಿನ ತುರ್ತು ಸರ್ಜರಿ; ಈಗ ಹೇಗಿದ್ದಾರೆ?

Jaggi Vasudev: ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ದೆಹಲಿಯ ಅಪೋಲೊ ಆಸ್ಪತ್ರೆಯಲ್ಲಿ ತುರ್ತು ಸರ್ಜರಿ ಮಾಡಲಾಗಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನವದೆಹಲಿ: ಅಧ್ಯಾತ್ಮ ಗುರು, ಈಶ ಫೌಂಡೇಷನ್‌ (Isha Foundation) ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ದೆಹಲಿಯಲ್ಲಿ ಮೆದುಳಿನ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ದೆಹಲಿಯ ಅಪೋಲೊ ಆಸ್ಪತ್ರೆಯಲ್ಲಿ ಜಗ್ಗಿ ವಾಸುದೇವ್‌ ಅವರಿಗೆ ಮೆದುಳಿನ ತುರ್ತು ಸರ್ಜರಿ ಮಾಡಲಾಗಿದೆ. ಈಗ ಜಗ್ಗಿ ವಾಸುದೇವ್‌ ಅವರ ಆರೋಗ್ಯ ಸ್ಥಿತಿಯು ಸುಧಾರಣೆ ಕಂಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹಾಗಾಗಿ, ಅನುಯಾಯಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಈಶ ಫೌಂಡೇಷನ್‌ ತಿಳಿಸಿದೆ.

ತೀವ್ರ ತಲೆನೋವು, ಕೈ-ಕಾಲುಗಳಲ್ಲಿ ಶಕ್ತಿ ಇಲ್ಲದಂತಾದ ಬಳಿಕ ಜಗ್ಗಿ ವಾಸುದೇವ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಮಾರ್ಚ್‌ 17ರಂದು ಅಪೋಲೊ ಆಸ್ಪತ್ರೆ ವೈದ್ಯರು ಮೆದುಳಿನ ತುರ್ತು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಡಾ.ವಿನೀತ್‌ ಸೂರಿ, ಡಾ.ಪ್ರಣವ್‌ ಕುಮಾರ್‌, ಡಾ.ಸುಧೀರ್‌ ತ್ಯಾಗಿ ಹಾಗೂ ಡಾ.ಎಸ್.‌ ಚಟರ್ಜಿ ಅವರು ಜಗ್ಗಿ ವಾಸುದೇವ್‌ ಅವರಿಗೆ ಸರ್ಜರಿ ಮಾಡಿದ್ದಾರೆ. ಈಗ ಸದ್ಗುರು ಅವರ ಆರೋಗ್ಯವು ಸುಧಾರಿಸಿದೆ ಎಂದು ತಿಳಿದುಬಂದಿದೆ.

ನಾಲ್ಕು ವಾರದಿಂದ ತೀವ್ರ ತಲೆನೋವು
ಸದ್ಗುರು ಜಗ್ಗಿ ವಾಸುದೇವ್‌ ಅವರ ಆರೋಗ್ಯದ ಕುರಿತು ಸದ್ಗುರು ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. “ಕಳೆದ ನಾಲ್ಕು ವಾರಗಳಿಂದ ಸದ್ಗುರು ಅವರು ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ಅವರು ಬಿಡುವಿಲ್ಲದ ಕೆಲಸ, ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ಇದರಿಂದ ಅವರ ತಲೆನೋವು ಜಾಸ್ತಿಯಾಗಿತ್ತು. ಮಾರ್ಚ್‌ 15ರಂದು ಎಂಆರ್‌ಐ ಸ್ಕ್ಯಾನ್‌ ಮಾಡಿದಾಗ ಅವರ ಮೆದುಳಿನಲ್ಲಿ ರಕ್ತಸ್ರಾವವಾಗುತ್ತಿದೆ ಎಂಬುದು ಗೊತ್ತಾಯಿತು. ಆದರೂ, ಜಗ್ಗಿ ವಾಸುದೇವ್‌ ಅವರು ಯಾವುದೇ ಕಾರ್ಯಕ್ರಮ ರದ್ದುಗೊಳಿಸದೆ, ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡರು” ಎಂದು ಮಾಹಿತಿ ನೀಡಲಾಗಿದೆ.

“ಪೇನ್‌ ಕಿಲ್ಲರ್‌ ಮಾತ್ರೆಗಳನ್ನು ತೆಗೆದುಕೊಂಡು ಸದ್ಗುರು ಜಗ್ಗಿ ವಾಸುದೇವ್‌ ಅವರು ಇಂಡಿಯಾ ಟುಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆದರೆ, ಮಾರ್ಚ್‌ 17ರಂದು ಸದ್ಗುರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಮೆದುಳಿನಲ್ಲಿ ತೀವ್ರ ರಕ್ತಸ್ರಾವ, ಮೆದುಳಿನ ಬಾವು ನೋಡಿದ ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿದರು. ಈಗ ಸದ್ಗುರು ಜಗ್ಗಿ ವಾಸುದೇವ್‌ ಅವರ ಆರೋಗ್ಯವು ಸ್ಥಿರವಾಗಿದೆ. ಅವರು ಕ್ಷಿಪ್ರಗತಿಯಲ್ಲಿ ಗುಣಮುಖರಾಗಿದ್ದಾರೆ. ವೈದ್ಯರು ಕೂಡ ಯಾವುದೇ ಅಪಾಯವಿಲ್ಲ” ಎಂಬುದಾಗಿ ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ಅನುಯಾಯಿಗಳಿಗೆ ತಿಳಿಸಲಾಗಿದೆ. ಮಾರ್ಚ್‌ 8ರ ಶಿವರಾತ್ರಿ ಕಾರ್ಯಕ್ರಮದಲ್ಲೂ ಜಗ್ಗಿ ವಾಸುದೇವ್‌ ಪಾಲ್ಗೊಂಡಿದ್ದರು.