ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆ  ಕೊನೆಯ ಹಂತದ ಕಾಮಗಾರಿ ಅವೈಜ್ಞಾನಿಕ.. ಏನಿದು ಆರೋಪ..?

ಹೊನ್ನಾವರ, ಮಾರ್ಚ್‌ 20 : ತಾಲೂಕಿನ ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆ  ಕೊನೆಯ ಹಂತದ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ. ಕೂಡಲೇ ಸಂಭಂದಪಟ್ಟವರು ಎಚ್ಚೆತ್ತು ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಸಬೇಕೆನ್ನುವ ಆಗ್ರಹ ಕೇಳಿಬಂದಿದೆ…

ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆ ಬಹುತೇಕ ಮುಕ್ತಾಯ ಹಂತ ತಲುಪಿದೆ. ಸೇತುವೆ ಕೊನೆಯ ಹಂತದಲ್ಲಿ ಚರ್ಚ ರಸ್ತೆಯ ತಾರಿಬಾಗಲು ನದಿ ತಟದ ಸಮೀಪದಲ್ಲಿ ಸೇತುವೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ದಡಕ್ಕೆ ಸೇತುವೆಗೆ ಇರುವ ಅಂದಾಜು ಐವತ್ತು ಮೀಟರ್ ಅಂತರದಲ್ಲಿ ನದಿಗೆ ಅಡ್ಡಲಾಗಿ ಮಣ್ಣು ತುಂಬಲಾಗಿದೆ. ಇನ್ನೊಂದು ಹಂತದಲ್ಲಿ ಕಾಮಗಾರಿ ನಡೆಸಿ ಜಿರೋ ಹಂತ ತಲುಪಿದಲ್ಲಿ ಸಮರ್ಪಕವಾಗಿರುತ್ತಿತ್ತು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಇನ್ನೂ ಸೇತುವೆ ಕಾಮಗಾರಿ ಸಮೀಪವೇ ನೀರಿನ ಟ್ಯಾಂಕ್, ಬಸ್ ತಂಗುದಾಣ ಇರುವುದು ಮುಂದಿನ ದಿನಗಳಲ್ಲಿ ಇದು ಸಮಸ್ಯೆಯೊಡ್ಡುತ್ತದೆ. ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಅನಾಹುತಕ್ಕೆ ಎಡೆ ಮಾಡಿ ಕೊಡುತ್ತದೆ ಎನ್ನುವ ಮಾತು ಕೇಳಿಬಂದಿದೆ…

ಈ ಕುರಿತು ಪಟ್ಟಣ ಪಂಚಾಯತ ಸದಸ್ಯ ಶಿವರಾಜ ಮೇಸ್ತ ಮಾತನಾಡಿ, ಈ ಮೊದಲಿನಂತೆ ಕಾಮಗಾರಿ ಎಸ್ಟಿಮೇಟ್ ಪ್ರಕಾರ ನಡೆದಲ್ಲಿ ನದಿ ತಟದಿಂದ ಕೇವಲ ಹತ್ತು ಮೀಟರ್‌ನೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಸೇತುವೆ ಎತ್ತರವಾಗಿದ್ದರಿಂದ ಇದೀಗ ನದಿತಟದಿಂದ ಅಂತರ ಹೆಚ್ಚಾಗಿದೆ ಇದರಿಂದ ಸಮಸ್ಯೆ ಉಂಟಾಗಿದೆ. ಗುತ್ತಿಗೆದಾರ ಕಂಪನಿ ಈ ಬಗ್ಗೆ ಗಮನಹರಿಸಬೇಕು. ಸಮರ್ಪಕ ಕಾಮಗಾರಿ ನಡೆಸಬೇಕೆಂದು ಆಗ್ರಹಿಸಿದರು. ನೀರಿನ ಟ್ಯಾಂಕ್, ಬಸ್ ತಂಗುದಾಣ ಪಟ್ಟಣ ಪಂಚಾಯತಕ್ಕೆ ಸಂಬಂಧಿಸಿರುವುದರಿಂದ ಸೂಕ್ತ ಪರಿಹಾರದ ಜತೆಗೆ ಪರ್ಯಾಯ ವ್ಯವಸ್ಥೆ ಮಾಡಿದಲ್ಲಿ ಅದನ್ನು ತೆರವುಗೊಳಿಸಲು ಸಹಕಾರ ನೀಡುತ್ತೇವೆ ಎಂದರು.

ಸೇತುವೆ ಕಾಮಗಾರಿ ಗುತ್ತಿಗೆದಾರ ಕಂಪನಿಯ ಇಂಜಿನಿಯರ್ ಆನಂದ್ ಮಾತನಾಡಿ, ಸ್ಥಳೀಯರು ತಮಗೆ ಅನೂಕೂಲವಾಗುವಂತೆ ಈ ಹಿಂದೆ ಬೇಡಿಕೆ ಇಟ್ಟಿದ್ದು ನಿಜ. ಪಟ್ಟಣ ಪಂಚಾಯತ ಬಸ್ ತಂಗುದಾಣ, ನೀರಿನ ಟ್ಯಾಂಕ್ ತೆರವುಗೊಳಿಸಲು ಅನುಮತಿ ನೀಡಿದ್ರೆ, ಸ್ಥಳೀಯರ ಆಗ್ರಹದಂತೆ ಕಾಮಗಾರಿ ನಡೆಸುವ ಭರವಸೆ ನೀಡಿದ್ದೇವೆ. ಕಾಮಗಾರಿಯಲ್ಲಿ ಯಾವುದೇ ಲೋಪವಾಗದೆ ಎಸ್ಟಿಮೇಟ್  ಪ್ರಕಾರ ನಡೆದಿದೆ ಎಂದು ಹೇಳಿದ್ದಾರೆ…

ಟ್ಯಾಂಕ್ ಮತ್ತು ಬಸ್ ನಿಲ್ದಾಣ ತೆಗೆದಲ್ಲಿ ಮಾತ್ರ ಸೇತುವೆ ಕಾಮಗಾರಿ ವೈಜ್ಞಾನಿಕ ರೀತಿಯಲ್ಲಿ ಆಗಲು ಸಾಧ್ಯವಾಗುತ್ತದೆ. ಮುಂದೆ ಬಸ್ ಸಂಚಾರವಾಗಲು ಅನೂಕೂಲವಾಗುತ್ತದೆ. ಈ ಬಗ್ಗೆ ಕಂಪನಿಯವರು ಪಟ್ಟಣ ಪಂಚಾಯತಕ್ಕೆ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ ಎಂದು ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಪೀಟರ್ ಮೆಂಡಿಸ್ ಆರೋಪಿಸಿದ್ದಾರೆ…

ಒಟ್ಟಾರೆ ಹೇಳುವುದಾದರೆ ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆ ಮಾವಿನಕುರ್ವಾ ಜನತೆಯ ದಶಕಗಳ ಕನಸು. ಇನ್ನೆನು ಕೆಲದಿನಗಳಲ್ಲೇ ಈ ಕನಸು ಸಂಪೂರ್ಣವಾಗಿ ನನಸಾಗಲಿದೆ. ಇತನ್ಮದ್ಯೆ ಕೊನೆಯ ಹಂತದ ಕಾಮಗಾರಿಯಲ್ಲಿ ಅವೈಜ್ಞಾನಿಕ ಎನ್ನುವ ಮಾತು ಇದೀಗ ಚರ್ಚೆಗಿಡು ಮಾಡಿದೆ. ಸೇತುವೆ ಗುತ್ತಿಗೆದಾರ ಕಂಪನಿ ಜನಾಭಿಪ್ರಾಯಕ್ಕೆ ಮಣಿದು ಕೊನೆಯ ಹಂತದ ಕಾಮಗಾರಿ  ನಡೆಸಲಿದೆಯೆ? ಅನ್ನೋದನ್ನು ಕಾದು ನೋಡಬೇಕಿದೆ…