ಅಯ್ಯೋ! ಅಂಕೋಲಾ ಬಸ್ ನಿಲ್ದಾಣದಲ್ಲಿ ಮತ್ತೊಂದು ಬೈಕ್ ಮಾಯ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?

ಅಂಕೋಲಾ, ಮಾರ್ಚ್‌ 20 : ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಈ ಹಿಂದೆ ಬೈಕ್ ಕಳ್ಳತನ ಸೇರಿದಂತೆ ನಿರಂತರ ಕಳ್ಳತನ ಪ್ರಕರಣ ವರದಿಯಾಗಿದ್ದು ಸೋಮವಾರ ದುಬಾರಿ ಬೆಲೆಯ ಬೈಕ್ ಕಳ್ಳತನವಾಗಿದೆ. ಬೈಕ್ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಬೀಳದಿರುವ ಕಾರಣ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಅಂಕೋಲಾದ ಸಣ್ಣ ಅಲಗೇರಿಯಲ್ಲಿ ಹಾಲಿ ವಾಸ್ತವ್ಯ ಹೂಡಿರುವ ರವಿಚಂದ್ರ ಪಾಂಡುರಂಗ ಶೆಟ್ಟಿ( ಅಸಿಸ್ಟೆಂಟ್ ಮ್ಯಾನೇಜರ್) ಸೋಮವಾರ ಮುಂಜಾನೆ 9.15 ರಿಂದ ಸಂಜೆ 6.15ರ ಅವಧಿಯಲ್ಲಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ತಮ್ಮ ರಾಯಲ್ ಎನ್ಫಿಲ್ಡ್ ಬೈಕ್ ಕಳ್ಳತನವಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ನಿಲ್ದಾಣದಲ್ಲಿ ಹಿಂದೆಯೂ ಹಲವು ಬಾರಿ ಬೈಕ್ ಕಳ್ಳತನವಾಗಿದೆ. ಸಿಸಿಟಿವಿ ಇಲ್ಲದಿರುವ ಕಾರಣ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ಪ್ರಯಾಸ ಪಡುವಂತಾಗಿದೆ. ಸಿಸಿಟಿವಿ ಅಳವಡಿಸಿ ಎಂದು ಸಾರಿಗೆ ಇಲಾಖೆಗೆ ಪೊಲೀಸರು ಈಗಾಗಲೇ ಮೂರು ಬಾರಿ ತಿಳಿಸಿದ್ದಾರೆ ಎನ್ನಲಾಗಿದೆ. ಕಿರಿಯ ಅಧಿಕಾರಿಗಳು ವಿಭಾಗೀಯ ಅಧಿಕಾರಿಗಳ ಮತ್ತು ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದಾಗ್ಯೂ ಸಿಸಿಟಿವಿ ಅಳವಡಿಸುವ ಕುರಿತು ಯಾವುದೇ ಗಂಭೀರವಾದ ಕ್ರಮಗಳು ಜರುಗಿಲ್ಲ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರ ಹಿತಾಸಕ್ತಿಯ ಬಗ್ಗೆ ಗಮನಹರಿಸದೆ ಮೌನವಾಗಿರುವುದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಬಹುದು. ಪರಸ್ಪರ ರಾಜಕೀಯ ಆರೋಪ ಮತ್ತು ಪ್ರತ್ಯಾಾರೋಪದಲ್ಲಿ ತೊಡಗಿರುವ ಆಡಳಿತ ವಿರೋಧಪಕ್ಷಗಳು ಈ ಬಗ್ಗೆ ಧ್ವನಿ ಎತ್ತದೇ ಇರುವುದು ಸಾರ್ವಜನಿಕ ಹಿತಾಸಕ್ತಿಯ ಕುರಿತ ನಿರ್ಲಕ್ಷವನ್ನು ಎತ್ತಿ ತೋರಿಸುತ್ತಿದೆ. ಕೇವಲ ಕಳ್ಳತನ ಪ್ರಕರಣಗಳು ಮಾತ್ರವಲ್ಲದೆ, ವಿದ್ಯಾರ್ಥಿನಿಯರ ಇಲ್ಲವೇ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು, ಗುಂಪು ಘರ್ಷಣೆ ಮತ್ತಿತರ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ನೆರವಾಗಬಲ್ಲ ಪ್ರಮುಖ ಅಸ್ತ್ರವೆಂದರೆ ಸಿಸಿಟಿವಿ. ಇಲಾಖೆ, ಸರ್ಕಾರ ಇಲ್ಲವೇ ದಾನಿಗಳಾದರೂ ನೆರವು ನೀಡಿ ಸಿಸಿಟಿವಿ ಅಳವಡಿಸಿ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಕಾರ್ಯ ನೆರವೇರಬೇಕು ಎನ್ನುವುದು ತಾಲೂಕಿನ ಪ್ರಜ್ಞಾವಂತರ ಆಶಯವಾಗಿದೆ.