ಕಾರವಾರ, (ಡಿಸೆಂಬರ್ 05): ಬಾಕಿ ವೇತನ ಪಾವತಿಗೆ ಆಗ್ರಹಿಸಿ ನೌಕರರು ಪ್ರತಿಭಟನೆಗೆ ಮುಂದಾಗಿರುವುದರಿಂದ ರಾಜ್ಯಾದ್ಯಂತ ಡಯಾಲಿಸಿಸ್ ಸೇವೆಯಲ್ಲಿ ಭಾರಿ ಅಡಚಣೆ ಉಂಟಾಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ. ಅಲ್ಲದೇ ಸಕಾಲಕ್ಕೆ ಚಿಕಿತ್ಸೆ ಸಿಗದೇ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ರೋಗಿಯೋರ್ವ ಸಾವನ್ನಪ್ಪಿದ್ದಾನೆ. ಗುಂಜಾವತಿ ಗ್ರಾಮದ ಸೈಯದ್ ಮೊಹಮ್ಮದ್ ಗೌಸ್ (58) ಮೃತ ವ್ಯಕ್ತಿ. ಈ ಮೂಲಕ ನೌಕರರು ಹಾಗೂ ಸರ್ಕಾರದ ನಡುವಿನ ಹಗ್ಗಾಜಗ್ಗಾಟಕ್ಕೆ ಒಂದು ಜೀವ ಬಲಿಯಾದಂತಾಗಿದೆ.
ಎರಡು ತಿಂಗಳಿಂದ ಮುಂಡಗೋಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೈಯದ್ ಡೆಯಾಲಿಸಿಸ್ ಮಾಡಿಸುತಿದ್ದರು. ಆದ್ರೆ, ನೌಕರರು ಕಳೆದ ಮೂರ್ನಾಲ್ಕು ದಿನಗಳಿಂದ ಕರ್ತವ್ಯ ಬಿಟ್ಟು ಪ್ರತಿಭಟನೆಗಿಳಿದಿದ್ದಾರೆ. ಇದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಗುಂಜಾವತಿ ಗ್ರಾಮದ ಸೈಯದ್ ಮಹ್ಮದ ಗೌಸ್ ಮುಂಡಗೋಡು ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಕೊನೆಯುಸಿರೆಳೆದಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗೆ ದುಬಾರಿಯಾಗಿದೆ. ಮೂತ್ರಕೋಶ(ಕಿಡ್ನಿ) ಸಮಸ್ಯೆಯಿಂದ ಬಳಲುತ್ತಿರುವ ಬಡವರು ಮತ್ತು ಮಧ್ಯಮ ವರ್ಗದವರು ಡಯಾಲಿಸಿಸ್ಗಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್ ಸಿಬ್ಬಂದಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ನಡೆಸಿದ್ದಾರೆ. ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಆಗಮನಿಸಿ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದರಿಂದ ರಾಜ್ಯದ ಹಲವೆಡೆ ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಸಿಗದೆ ರೋಗಿಗಳು ತೀವ್ರ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಸರ್ಕಾರ ನೌಕರರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದೆ.ಆದ್ರೆ, ನೌಕರರು ಭರವಸೆ ಬೇಡ ಅಧಿಕರತ ಆದೇಶ ಹೊರಡಿಸಿ ಎಂದು ಪಟ್ಟು ಹಿಡಿದಿದ್ದಾರೆ. ಹೀಗೆ ನೌಕರರು ಹಾಗೂ ರಾಜ್ಯ ಸರ್ಕಾರದ ನಡುವೆ ಹಗ್ಗಾಜಗ್ಗಾಟ ಮುಂದುವರೆದಿದ್ದು, ಇತ್ತ ಅಮಾಯಕ ಜೀವವೊಂದು ಹೋಗಿದೆ.
ಸರ್ಕಾರ ಕುಡಲೇ ಇವರ ಸಮಸ್ಯೆಯನ್ನು ಆಲಿಸಿ ಕರ್ತವ್ಯ ಹಾಜರಾಗುವಂತೆ ಮಾಡಬೇಕು. ಇಲ್ಲವಾದಲ್ಲಿ ರೋಗಿಗಳ ಪರಿಸ್ಥಿತಿ ಯಾವ ಹಂತಕ್ಕೆ ಹೋಗುತ್ತೆ ಎನ್ನುವುದು ಊಹಿಸಲು ಅಸಾಧ್ಯ.