ಹುತಾತ್ಮ ಪ್ರಾಂಜಲ್​ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ವಿತರಣೆ

ಬೆಂಗಳೂರು, ಡಿಸೆಂಬರ್ 5: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮರಾಗಿದ್ದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬದವರಿಗೆ ರಾಜ್ಯ ಸರ್ಕಾರದ ವತಿಯಿಂದ ಮಂಗಳವಾರ 50 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಯಿತು. ಕ್ಯಾಪ್ಟನ್ ಪ್ರಾಂಜಲ್ ಮೃತದೇಹ ಬೆಂಗಳೂರಿಗೆ ತಂದ ವೇಳೆ ಅವರ ಕುಟುಂಬದವರಿಗೆ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ, ನಂತರ ಆ ವಿಚಾರದಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ.

ಪರಿಹಾರ ನೀಡುವ ವಿಚಾರವಾಗಿ ಸಿದ್ದರಾಮಯ್ಯ ಆರಂಭದಲ್ಲಿ ಪ್ರಾಂಜಲ್ ಯಾರೆಂದೇ ಗೊತ್ತಿಲ್ಲವೆಂಬ ರೀತಿಯಲ್ಲಿ ಉತ್ತರಿಸಿದ್ದರು. ನಂತರ, ಕೊಡುತ್ತೇವೆ ಎಂದು ಹೇಳಿದ್ದರೆ ಕೊಟ್ಟೇ ಕೊಡುತ್ತೇವೆ. ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದು ಹೇಳಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿದ್ದ ಪ್ರತಿಪಕ್ಷಗಳು ಕೂಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದವು.

ಸರ್ಕಾರದ ನಡೆಯ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರ ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರು ಹುತಾತ್ಮ ಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಈ ಬಗ್ಗೆ ವಿಚಾರಿಸಲು 2 ದಿನದ ಹಿಂದೆ ನಾನು ಪ್ರಾಂಜಲ್ ತಂದೆಗೆ ಫೋನ್ ಮಾಡಿದ್ದೆ. ಸರ್ಕಾರದ ವತಿಯಿಂದ ಯಾರಾದರೂ ಫೋನ್ ಮಾಡಿ ಮಾತನಾಡಿದರೇ ಎಂದು ಕೇಳಿದೆ. ಅವರ ತಂದೆ ‘ಇವತ್ತಿನವರೆಗೂ ಸಹ ನನಗೆ ಯಾವುದೇ ಫೋನ್ ಬಂದಿಲ್ಲ’ ಅಂತ ಹೇಳಿದರು ಎಂದು ತೇಜಸ್ವಿ ಸೂರ್ಯ ಹೇಳಿದ್ದರು. ಅಲ್ಲದೆ, ಶೀಘ್ರ ಪರಿಹಾರ ಬಿಡುಗಡೆ ಮಾಡುವಂತೆ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸೋಮವಾರ ತಡರಾತ್ರಿ ಮುಖ್ಯಮಂತ್ರಿಗಳು ಟ್ವೀಟ್ ಮಾಡಿ, ಪರಿಹಾರಧನವನ್ನು ಮಂಜೂರು ಮಾಡಿ ಆದೇಶ ಹೊರಡಿಸಿದ್ದರು.

‘ಜಮ್ಮು – ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 ( ಐವತ್ತು ಲಕ್ಷ ) ಪರಿಹಾರಧನವನ್ನು ನಮ್ಮ ಸರ್ಕಾರದಿಂದ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ, ಬಲಿದಾನಕ್ಕೆ ಬೆಲೆಕಟ್ಟಲಾಗದು. ಆದರೆ ದೇಶದ ಕೋಟ್ಯಂತರ ಜನರ ಪರವಾಗಿ ಈ ಹೊತ್ತಿನಲ್ಲಿ ಅವರ ಕುಟುಂಬದ ಜೊತೆ ನಿಲ್ಲಬೇಕಾದದ್ದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. ಪರಿಹಾರಧನದ ಚೆಕ್ ಅನ್ನು ಸಿದ್ಧಪಡಿಸಲಾಗಿದ್ದು ನಾಳೆ ಮೃತ ಯೋಧನ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಮತ್ತೊಮ್ಮೆ ಕ್ಯಾಪ್ಟನ್ ಪ್ರಾಂಜಲ್ ಅವರ ಅನನ್ಯ ದೇಶಸೇವೆ, ಸಮರ್ಪಣಾಭಾವವನ್ನು ಗೌರವದಿಂದ ಸ್ಮರಿಸುತ್ತಾ, ಗೌರವ ನಮನ ಸಲ್ಲಿಸುತ್ತೇನೆ’ ಎಂದು ಸೋಮವಾರ ತಡರಾತ್ರಿ ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದರು.

ಇದೀಗ ಮಂಗಳವಾರ ಪರಿಹಾರದ ಚೆಕ್ ಅನ್ನು ಪ್ರಾಂಜಲ್ ಕುಟುಂಬವದವರಿಗೆ ಹಸ್ತಾಂತರಿಸಲಾಗಿದೆ.