ಮೂತ್ರ ವಿಸರ್ಜನೆ ಕೊಠಡಿಗೆ ಬೀಗ; ಚುನಾವಣೆ ನೀತಿ ಸಂಹಿತೆ ಮೂತ್ರಾಲಯಕ್ಕೂ ಜಾರಿ ಆಯಿತೇ…? ವ್ಯಂಗ್ಯವಾಡಿದ ಜನರು

ಅಂಕೋಲಾ, ಮಾರ್ಚ್‌ 20 : ಇತ್ತೀಚಿನ ದಿನಗಳಲ್ಲಿ ಇಲ್ಲಿಯ ತಹಶೀಲ್ದಾರ ಕಾರ್ಯಾಲಯ ನಾನಾ ಕಾರಣಗಳಿಂದ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಸುದ್ದಿಯಾಗುತ್ತಿರುವುದು ಮಾತ್ರ ಕೆಲವರ ವ್ಯಂಗ್ಯ ಮಾತು ಮತ್ತು ಅಸಮಾಧಾನಕ್ಕೂ ಕಾರಣವಾದಂತಿದೆ.

ತಾಲೂಕಿನ ವಿವಿಧ ಪ್ರದೇಶಗಳಿಂದ ದಿನ ನಿತ್ಯ ನೂರಾರು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಈ ಕಚೇರಿಗೆ ಬಂದು ಹೋಗುತ್ತಿರುತ್ತಾರೆ. ಆದರೆ ಇಲ್ಲಿನ ಕೆಲ ಅತ್ಯಗತ್ಯ ಮೂಲಭೂತ ಸೌಲಭ್ಯದ ಕೊರತೆಯಿಂದ ಜನತೆ ಮಾತ್ರ ಪರಿತಪಿಸುವಂತಾಗಿದೆ. ತಹಶೀಲ್ದಾರ ಕಚೇರಿ ಕಟ್ಟಡದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ. ಆದರೆ ಸಾರ್ವಜನಿಕರಿಗೆ ಮಾತ್ರ ಹೆಸರಿಗಷ್ಟೇ ಶೌಚಾಲಯ ಎಂಬಂತಾಗಿದ್ದು, ಅದನ್ನು ಉಪಯೋಗಿಸದಂತೆ ಅದರ ಬಾಗಿಲುಗಳಿಗೆ ಬೀಗ ಜಡಿಯಲಾಗಿದೆ.

ಅಲ್ಲದೇ ಮೂತ್ರ ವಿಸರ್ಜನೆ ನಿಷೇಧಿಸಲಾಗಿದೆ ಎನ್ನುವುದು ಎದ್ದು ಕಾಣುವಂತೆ ಬಿಳಿ ಹಾಳೆಯ ಮೇಲೆ ಕಪ್ಪು ಅಕ್ಷರಗಳ ಪ್ರಿಂಟ್ ತೆಗೆದು ಬಾಗಿಲ ಮೇಲೆ ಅಂಟಿಸಲಾಗಿದೆ (ಪ್ರಿಟಿಂಗ್ ಬರವಣಿಗೆಯಲ್ಲಿಯೂ ತಪ್ಪು ಬರೆದು, ನಂತರ ತಿದ್ದು ಪಡಿ ಮಾಡಲಾಗಿದೆ ). ಕಚೇರಿಯ ಹೊರ ಆವರಣದಲ್ಲಿರುವ ಈ ಹಿಂದಿನ ಶೌಚಾಲಯವೂ ನಿರ್ವಹಣೆ ಕೊರತೆಯಿಂದ ಸಾರ್ವಜನಿಕ ಉಪಯೋಗಕ್ಕೆ ಬಾರದೇ ಗಬ್ಬೆದ್ದು ನಾರುತ್ತಿದೆ.

ಇದರಿಂದ ಸಾರ್ವಜನಿಕರು ತಮ್ಮ ಶೌಚ ಬಾಧೆಯನ್ನು ತೀರಿಸಿಕೊಳ್ಳಲಾಗದೇ, ಸಂಕಟಪಡುತ್ತಾ ಆಡಳಿತ ವರ್ಗಕ್ಕೆ ಹಿಡಿ ಶಾಪ ಹಾಕುವಂತಾಗಿದೆ. ಇನ್ನು ಕೆಲವರು ದೇಹದ ನೈಸರ್ಗಿಕ ಮತ್ತು ಅನಿವಾರ್ಯ ಕರೆಯನ್ನು ತಡೆಹಿಡಿಯಲಾಗದೇ, ಅಲ್ಲಿಯೇ ಅಕ್ಕ ಪಕ್ಕದ ಸಂದಿ ಗೊಂದಿಗಳಲ್ಲಿ ಹೋಗಿ ಇಲ್ಲವೇ ಕಚೇರಿಯ ಕಟ್ಟಡದ ಗೋಡೆ ಬಳಿ ಅನಿವಾರ್ಯವಾಗಿ ತಮ್ಮ ಶೌಚ ಬಾಧೆ ತೀರಿಸಿಕೊಂಡು ತೆರಳುತ್ತಿದ್ದಾರೆ ಎನ್ನಲಾಗಿದ್ದು, ಇದರಿಂದ ಸುತ್ತ ಮುತ್ತ ದುರ್ವಾಸನೆ ಹರಡುವುದು ಮತ್ತು ಸಾಂಕ್ರಾಮಿಕ ರೋಗದ ಭೀತಿ ಸಾಧ್ಯತೆ ಕಾಡುವಂತಾಗಿದೆ.

ಸಾರ್ವಜನಿಕ ಹಿತ ದೃಷ್ಟಿಯಿಂದ ಸಂಬಂಧಿತ ಇಲಾಖೆ ಮತ್ತು ಹಿರಿಯ ಅಧಿಕಾರಿಗಳು ಈಗಲಾದರೂ ಎಚ್ಚೆತ್ತು, ಕಣ್ತೆರೆದು ನೋಡಿ, ಸಮಸ್ಯೆ ಪರಿಹಾರಕ್ಕೆ ಮುಂದಾಗುವರೇ ಕಾದುನೋಡಬೇಕಿದೆ. ಒಟ್ಟಿನಲ್ಲಿ ತಹಶೀಲ್ದಾರ ಕಾರ್ಯಾಲಯದವರು ಬರೆದು ಅಂಟಿಸಿದ, ಮೂತ್ರ ವಿಸರ್ಜನೆ ನಿಷೇಧಿಸಲಾಗಿದೆ ಎಂಬ ಸಾರ್ವಜನಿಕ ಸೂಚನೆ, ಲೋಕಸಭಾ ಚುನಾವಣಾ ನೀತಿ ಸಂಹಿತೆಯ ಭಾಗವಾಗಿರಬಹುದೇ ಎಂದು ಕೆಲವರು ವ್ಯಂಗ್ಯದಿಂದ ಮಾತನಾಡಿಕೊಂಡಂತಿದೆ…