ಅದ್ದೂರಿಯಾಗಿ ರಂಜಿಸಿದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

ಅಂಕೋಲಾ: ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಅದ್ದೂರಿಯಾಗಿ ರಂಜಿಸಿ ಜನಮನ ಸೂರೆಗೊಂಡಿತು.
ಜಿಲ್ಲಾ ಪಂಚಾಯಿತಿ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಆಯೋಜಿಸಲಾಗಿತ್ತು.
ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ನಾಗೇಶ ರಾಯ್ಕರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ದಿನದ ಶುಭದಿನದಲ್ಲಿ ಪ್ರತಿಭಾ ಕಾರಂಜಿ ಆಯೋಜಿಸಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳ ವಿಶೇಷ ಪ್ರತಿಭೆ ಅನಾವರಣಗೊಳ್ಳಲು ಈ ರೀತಿಯ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಮಾತನಾಡಿ, ಶಿಕ್ಷಕರು ದೇಶದ ಪ್ರಗತಿಗೆ ಪೂರಕವಾದ ಮಾನವ ಸಂಪನ್ಮೂಲಗಳ ನಿರ್ಮಾತೃರು. ಕೇವಲ ಅಂಕಗಳ ಗಳಿಕೆಗೆ ಒತ್ತು ನೀಡದೇ ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಶ್ರಮಿಸಬೇಕು. ಪ್ರತಿಭೆಗೆ ತಕ್ಕ ಅವಕಾಶವನ್ನು ಕಲ್ಪಿಸಬೇಕು. ನಿರ್ಣಾಯಕರು ನಿರ್ಧರಿತ ಮಾನದಂಡಗಳಿಗೆ ಅನುಗುಣವಾಗಿ ನಿಷ್ಪಕ್ಷಪಾತವಾದ ನಿರ್ಣಯವನ್ನು ನೀಡಬೇಕು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಮಹೇಶ ನಾಯಕ, ಪುರಸಭೆ ಸದಸ್ಯೆ ಶಾಂತಲಾ ನಾಡಕರ್ಣಿ, ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ ನಾಯಕ, ದೈಹಿಕ‌ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ, ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಭಾಸ್ಕರ ಗಾಂವಕರ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಕಾರ್ಯಕ್ರಮದ ನೋಡಲ್ ಅಧಿಕಾರಿ ಬಿ.ಎಲ್. ನಾಯ್ಕ ಪ್ರಾಥಮಿಕ‌ ಶಾಲಾ ಶಿಕ್ಷಕರ ಸಂಘದ‌ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ವೇದಿಕೆಯಲ್ಲಿದ್ದರು.ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ಗಾಂವಕರ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ್ ನಾಯ್ಕ್ ವಂದಿಸಿದರು.ಶಿಕ್ಷಕ ಬಾಲಚಂದ್ರ ನಾಯಕ ನಿರೂಪಿಸಿದರು.

ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ತಾಲ್ಲೂಕಿನ ನಾಲ್ಕು ವಲಯಗಳಿಂದ ಆಯ್ಕೆಯಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾದರು. ಜಾನಪದ ನೃತ್ಯ, ಛದ್ಮವೇಷ, ಮಿಮಿಕ್ರಿ, ಗಜಲ್ ಮತ್ತು ಭರತ ನಾಟ್ಯ ಸ್ಪರ್ಧೆಗಳು ವಿಶೇಷ ಮನೋರಂಜನೆ ಒದಗಿಸಿದವು. ಬೇಟಿ ಬಚಾವೋ ಬೇಟಿ ಪಡಾವೋ ಘೋಷವಾಕ್ಯ ಹೊಂದಿದ ಹೆಣ್ಣು ಮಗುವನ್ನು ರಕ್ಷಿಸಿ, ಶ್ರವಣಕುಮಾರ, 18 ಮೆಟ್ಟಿಲೇರಿ ಕುಳಿತಿರುವ ಅಯ್ಯಪ್ಪ ಸ್ವಾಮಿ, ಬಾಲ್ಯ ವಿವಾಹ ಜಾಗೃತಿ, ಮತ್ಸ್ಯ ಕನ್ಯೆ, ಪದ್ಮಶ್ರೀ ತುಳಸಿ ಗೌಡರ ಛದ್ಮವೇಶಗಳು ಗಮನ ಸೆಳೆದವು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ, ನೇತೃತ್ವದಲ್ಲಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಬಿ ಎಲ್ ನಾಯ್ಕ್ ಮುಂದಾಳತ್ವದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಹಿರಿಯ ಉಪನ್ಯಾಸಕರು, ಪ್ರೌಢಶಾಲಾ ಶಿಕ್ಷಕರು, ಬಿ ಆರ್ ಸಿ ರಾಘವೇಂದ್ರ ನಾಯ್ಕ್, ರಾಜು ನಾಯಕ ಮುಂತಾದವರ ವಿಶೇಷ ಪ್ರಯತ್ನದಿಂದ ಯಶಸ್ವಿಯಾಗಿ ಕಾರ್ಯಕ್ರಮ ಸಂಪನ್ನಗೊಂಡಿತು.
ಚುನಾವಣಾ ಮಾದರಿಯಲ್ಲಿ ಶಿಸ್ತುಬದ್ಧವಾಗಿ ಸ್ಪರ್ಧೆಗಳ ಯಾದಿ, ಕೊಠಡಿಗಳ ಹಂಚಿಕೆ, ಮೇಲ್ವಿಚಾರಕರು ಮತ್ತು ನಿರ್ಣಾಯಕರ ನಿಯೋಜನೆ, ಏಕಕಾಲದಲ್ಲಿ ವಿವಿಧ ವೇದಿಕೆಗಳ ಸಂಘಟನೆ, ಹಾಗೂ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಯಿತು.