ಮಾರುತಿ ನಾಯ್ಕ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ: ಮಾನವ ಹಕ್ಕುಗಳ ರಕ್ಷಣಾ ಪರಿಷತ್ ವತಿಯಿಂದ ಆಗ್ರಹ


ಅಂಕೋಲಾ: ಕಾರವಾರ ತಾಲೂಕಿನ ಶಿರವಾಡದ ಮಾರುತಿ ನಾಯ್ಕ ಪೊಲೀಸರ ಕಿರುಕುಳದಿಂದ ನೊಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಂತ್ರಸ್ತ ಕುಟುಂಬಕ್ಕೆ ಭ್ರಷ್ಟ ಅಧಿಕಾರಿಗಳ ವೇತನದಿಂದ ಪರಿಹಾರವನ್ನು ಕೊಡಿಸುವಂತೆ ಆಗ್ರಹಿಸಿ ತಹಶೀಲ್ದಾರರ ಮೂಲಕ ಉತ್ತರ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ಮಹಾ ನಿರ್ದೇಶಕರು ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಒಂದುವರೆ ತಿಂಗಳ ಹಿಂದೆ ಹಿಂದೂ ದೇವತೆಗಳನ್ನು ನಿಂದಿಸಿದ್ದ ದಲಿತ ಮುಖಂಡನ ವಿಡಿಯೋ ರೆಕಾರ್ಡ್ ಮಾಡಿದ್ದ ಯುವಕ ಮಾರುತಿ ನಾಯ್ಕ ಡೆತ್ ನೋಟ್ ಬರೆದು ನೇಣು ಬಿಗಿದುಕೊಂಡು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಪೂರ್ವದಲ್ಲಿ ವಿಡಿಯೋ ಕೂಡ ಮಾಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಲ್ಲರ ಗಮನಕ್ಕೂ ಬಂದಿರುತ್ತದೆ. ಸದರಿ ಡೆತ್ ನೋಟ್ ಮತ್ತು ವೀಡಿಯೋದಲ್ಲಿ ತನ್ನ ಸಾವಿಗೆ ಕಾರಣರಾದ ಕಾರವಾರದ ಸಿಪಿಐ ಕುಸುಮಾದಾರ್, ಇನ್ನೋರ್ವ ಪಿಎಸ್ಐ, ಗ್ರಾಮೀಣ ಠಾಣೆಯ ಸಿಬ್ಬಂದಿ ದೇವರಾಜ್ ಹಾಗೂ ಕಾರವಾರದ ಎಲಿಷ ಎಲಕಪಾಟಿ, ಬಸವರಾಜ ಹಾಗೂ ಆತನ ಪತ್ನಿ, ಸುರೇಶ ಹಾಗೂ ಆತನ ಪತ್ನಿ ಮುಂತಾದವರ ಹೆಸರು ಬರೆದಿಡಲಾಗಿದೆ.ಹಿಂದೂ ದೇವರನ್ನು ನಿಂದಿಸಿದ ಎಲಿಶಾ ಎಲಕಪಾಟಿ ಈ ಅಧಿಕಾರಿಗಳನ್ನು ಉಪಯೋಗಿಸಿದ್ದಾನೆ ಎಂದು ದಾಖಲಾಗಿದೆ. ಇಂತಹ ವ್ಯಕ್ತಿಗಳು ಕಾನೂನಿನ ಅಡಿಯಲ್ಲಿ ಇದ್ದು ಸಾಮಾನ್ಯ ಜನರಿಗೆ ಮಾಡುತ್ತಿರುವ ಅನ್ಯಾಯವನ್ನು ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಖಂಡಿಸುತ್ತದೆ

ಈ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಿ ಮಾರುತಿ ನಾಯ್ಕ್ ಅವರ ಸ್ವತಂತ್ರವಾಗಿ ಬದುಕುವ ಹಕ್ಕು ಹಾಗೂ ಆ ಮುದ್ದು ಮಕ್ಕಳನ್ನು ತಂದೆಯಿಂದ ದೂರ ಮಾಡಿ ಮಾನವರು ಬದುಕುವ ಹಕ್ಕುಗಳನ್ನು ಕಸಿದುಕೊಂಡ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ನೀಡಿ ಮಾರುತಿ ಇವರ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿ. ಅವರ ಕುಟುಂಬ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಆರೋಪ ಸ್ಥಾನದಲ್ಲಿರುವ ಭ್ರಷ್ಟ ಪೊಲೀಸ್ ಅಧಿಕಾರಿಗಳಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಾನವ ಹಕ್ಕುಗಳ ರಕ್ಷಣಾ ಪರಿಷತ್, ಜಿಲ್ಲಾ ಉಪಾಧ್ಯಕ್ಷ ಕಿರಣ್ ಗಾಂವಕರ, ತಾಲ್ಲೂಕು ಅಧ್ಯಕ್ಷ ಸೂರಜ ನಾಯ್ಕ್, ಮಹಿಳಾ ಉಪಾಧ್ಯಕ್ಷೆ ಸುಪ್ರಿಯಾ ನಾಯ್ಕ, ಪದಾಧಿಕಾರಿಗಳಾದ ಐಶ್ವರ್ಯ ನಾಯ್ಕ್, ನಾಗೇಂದ್ರ ನಾಯ್ಕ್, ನಾಗಪ್ಪ ಹರಿಕಂತ್ರ, ದಿಲೀಪ್ ನಾಯ್ಕ್, ರವಿ ನಾಯ್ಕ್, ಪೇಟು ಗೌಡ ಇದ್ದರು. ತಹಶೀಲ್ದಾರ್ ಅಶೋಕ್ ಭಟ್ ಮನವಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್ ಅಶೋಕ ಭಟ್ ಅವರಿಗೆ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ವತಿಯಿಂದ ಗೌರವಿಸಲಾಯಿತು.