ಪ್ರವೀಣ್ ನೆಟ್ಟಾರು ಕೊಲೆ ಕೇಸ್​: ಪರಪ್ಪನ ಅಗ್ರಹಾರಕ್ಕೆ ವರ್ಗಾಯಿಸಲು 11 ಆರೋಪಿಗಳ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ‌ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾಯಿಸಲು 11 ಆರೋಪಿಗಳ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ತಿರಸ್ಕರಿಸಿದೆ. ತಮ್ಮ ಮೇಲೆ‌ ದಾಳಿ ನಡೆಯುವ ಭೀತಿಯಿಂದ‌ ಎಲ್ಲಾ ಆರೋಪಿಗಳನ್ನೂ ಪರಪ್ಪನ‌ ಅಗ್ರಹಾರ ಜೈಲಿಗೆ ವರ್ಗಾಯಿಸಲು ಅಬ್ದುಲ್ ಬಷೀರ್ ಮತ್ತಿತರರು ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರು, ಮಾರ್ಚ್​​ 21 : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (praveen nettaru) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ‌ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾಯಿಸಲು 11 ಆರೋಪಿಗಳ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ತಿರಸ್ಕರಿಸಿದೆ. ತಮ್ಮ ಮೇಲೆ‌ ದಾಳಿ ನಡೆಯುವ ಭೀತಿಯಿಂದ‌ ರಿಟ್ ಅರ್ಜಿ ಸಲ್ಲಿಸುವ ಮೂಲಕ ಎಲ್ಲಾ ಆರೋಪಿಗಳನ್ನೂ ಪರಪ್ಪನ‌ ಅಗ್ರಹಾರ ಜೈಲಿಗೆ ವರ್ಗಾಯಿಸಲು ಅಬ್ದುಲ್ ಬಷೀರ್ ಮತ್ತಿತರರು ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಕುಟುಂಬದ ಸದಸ್ಯರು, ವಕೀಲರೊಂದಿಗೆ ಭೇಟಿಗೆ ಸಮಸ್ಯೆಯ ಕಾರಣ ನೀಡಿ ರಿಟ್ ಸಲ್ಲಿಸಲಾಗಿತ್ತು.

ಎನ್ಐಎ ಸೂಚನೆ ಮೇರೆಗೆ ಕೊಲೆ‌ ಆರೋಪಿಗಳನ್ನು ವರ್ಗಾಯಿಸಲಾಗಿತ್ತು. ಮೊಹಮ್ಮದ್ ಜಬೀರ್ ತಪ್ಪೊಪ್ಪಿಗೆ ಸಾಕ್ಷಿಯಾಗಲು ಸಿದ್ಧನಿದ್ದ ಹಿನ್ನೆಲೆ ಸುರಕ್ಷತೆ ದೃಷ್ಟಿಯಿಂದ 15 ಆರೋಪಿಗಳನ್ನು ವಿವಿಧ ಜೈಲುಗಳಿಗೆ ಖೈದಿಗಳನ್ನು ವರ್ಗಾಯಿಸಲು ಎನ್ಐಎ ಪತ್ರ ಬರೆದಿತ್ತು. ಆರೋಪಿಗಳನ್ನು ಬೆಂಗಳೂರು ಜೈಲಿಗೆ ವರ್ಗಾಯಿಸಲು ಹೈಕೋರ್ಟ್ ನಕಾರವೆತ್ತಿದೆ.

ಜೈಲುಗಳಲ್ಲಿ ಖೈದಿಗಳಿಗೆ ವಿಡಿಯೋ ಕಾನ್ಫರೆನ್ಸ್​ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ. ಕುಟುಂಬದ ಸದಸ್ಯರು, ವಕೀಲರೊಂದಿಗೆ ಕಾನೂನಿಗೆ ಅನುಗುಣವಾಗಿ ಸಂವಹನಕ್ಕೆ ಅವಕಾಶ ಮತ್ತು ಸಂಭಾಷಣೆ ವೇಳೆ ಹೆಡ್​ ಫೋನ್ ಒದಗಿಸಲು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.

ಪ್ರಕರಣದ 21 ನೇ ಆರೋಪಿಯಾಗಿರುವ ಮೊಹಮ್ಮದ್​ ಜಬೀರ್​ ಜಾಮೀನು ಅರ್ಜಿಯನ್ನು ಹೈಕೋರ್ಟ್​ ತಿರಸ್ಕರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ನಿವಾಸಿಯಾಗಿರುವ ಜಬೀರ್​​ನನ್ನು ತಮ್ಮ ಕಸ್ಟಡಿ ವಿಸ್ತರಣೆ ಮಾಡಿ ಡಿಫಾಲ್ಟ್‌ ಜಾಮೀನು ತಿರಸ್ಕರಿಸಿ ವಿಶೇಷ ಎನ್‌ಐಎ ನ್ಯಾಯಾಲಯವು 2023ರ ಫೆಬ್ರವರಿ 9ರಂದು ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.