ಹೊನ್ನಾವರ, ಮಾರ್ಚ್ 21 : ತಾಲೂಕಿನ ಕಾಸರಕೋಡ ಟೊಂಕಾ ಮೀನುಗಾರು ಕೆಲ ದಿನದ ಹಿಂದೆ ಸಭೆ ಸೇರಿ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕಾರಿಸುವುದಾಗಿ ನಿರ್ಧರಿಸಿದ್ದರು. ಈ ವಿಚಾರದ ತಿಳಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಗುರುವಾರ ಕಾಸರಕೋಡ ಗ್ರಾಮಕ್ಕೆ ಭೇಟಿ ನೀಡಿ ನಿರ್ಧಾರ ಕೈಬಿಡುವಂತೆ ಮೀನುಗಾರರ ಮನವೊಲಿಸಲು ಪ್ರಯತ್ನಿಸಿದರು.
ಇಲ್ಲಿನ ಮಲ್ಲುಕುರ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ಮತ್ತು ಮೀನುಗಾರರ ಜೊತೆ ಡಿಸಿಯವರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಯವರಿಗೆ ಮೀನುಗಾರರು ಬಂದರು ಕಾಮಗಾರಿ ಕೈ ಬಿಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಈವೇಳೆ ಮಾತನಾಡಿದ ಡಿಸಿಯವರು ಈಗಾಗಲೇ ಈ ಸಮಸ್ಯೆ ಬಗೆಹರಿಯಬೇಕಿತ್ತು. ನೀವು ನಿಮ್ಮ ಹೋರಾಟ ಮಾಡಿರುವಿರಿ. ನಾವು ನಿಮ್ಮ ಮೇಲೆ ದಬ್ಬಾಳಿಕೆ ಮಾಡುವುದಾಗಲಿ, ಒತ್ತಡ ಹೇರುವುದಾಗಲಿ ಮಾಡಿಲ್ಲ. ಆದರೆ ಸರ್ಕಾರದ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿರುತ್ತದೆ. ನಮ್ಮ ವ್ಯಾಪ್ತಿಯಲ್ಲಿ ಆಗಬಹುದಾದ ಸಹಾಯವನ್ನು ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಾಗಿದೆ. ನ್ಯಾಯಾಲಯದ ಅಂತಿಮ ತಿರ್ಪಿಗೊಳಪಟ್ಟು ನಿರ್ಧರಿಸಬೇಕಾಗುತ್ತದೆ. ನ್ಯಾಷನಲ್ ಗ್ರಿನ್ ಟ್ರಿಬ್ಯೂನಲ್ ನಿಂದ ಬಂದರು ಕೆಲಸಕ್ಕೆ ಕ್ಲಿಯರೆನ್ಸ್ ನೀಡಿದ್ದಾರೆ. ಸರ್ಕಾರದ ವತಿಯಿಂದ ರಸ್ತೆ ಮಾಡಬೇಕಾಗಿದೆ. ರಸ್ತೆಮಾರ್ಗಕ್ಕೊಳಪಡುವ ಜಮೀನಿನ ಮಾಲೀಕರಿಗೆ ಯೋಗ್ಯ ಪರಿಹಾರ ಸರ್ಕಾರದಿಂದ ನೀಡಲಾಗುತ್ತದೆ. ಅಭಿವೃದ್ಧಿ ವಿಚಾರಕ್ಕೆ ಎಲ್ಲರು ಕೈಜೋಡಿಸುವುದು ಅಗತ್ಯ. ಯಾವುದೇ ಹಿತಾಸಕ್ತಿಗೆ ಧಕ್ಕೆ ಮಾಡಿ ಅಭಿವೃದ್ಧಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ಅತ್ಯಮೂಲ್ಯವಾದದು ಯಾವುದೇ ಕಾರಣಕ್ಕು ಮತದಾನದಿಂದ ವಂಚಿತರಾಗಬೇಡಿ ಎಂದು ಕರೆನೀಡಿದರು.
ಮುಂದೆ ಮೀನುಗಾರರಿಗೆ ಮತ್ತು ಸ್ಥಳೀಯರಿಗೆ ಅನ್ಯಾಯವಾಗದಂತೆ ಯಾವ ರೀತಿ ಮುಂದುವರಿಯಬೇಕು ಎನ್ನುವ ಕುರಿತು ಸಧ್ಯದಲ್ಲೇ ಜಂಟಿ ಮಾತುಕತೆ ನಡೆಸೋಣ. ಅಲ್ಲಿಯವರೆಗೆ ಬಂದರು ನಿರ್ಮಾಣ ಕಂಪನಿಯವರು ಯಾವುದೇ ಕಾಮಗಾರಿ ನಡೆಸದಂತೆ ಕ್ರಮ ವಹಿಸಲಾಗುವದು ಎಂದು ಡಿಸಿಯವರು ಭರವಸೆ ನೀಡಿದರು…
ಇದಕ್ಕೆ ಮೀನುಗಾರರಾದ ರಾಜೇಶ್ ತಾಂಡೇಲ್, ಜಗ್ಗು ತಾಂಡೇಲ್, ರಾಜು ತಾಂಡೇಲ್, ಹಮ್ಜಾ ಸಾಬ್ ಮತ್ತಿತರರು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿ ತಮ್ಮ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂದೆ ಪಡೆಯಬೇಕು ಮತ್ತು ವಾಣಿಜ್ಯ ಬಂದರು ಯೋಜನೆ ಕೈ ಬಿಡಬೇಕು. ಮೀನುಗಾರರು ಈಗ ವಾಸವಿರುವ ಮತ್ತು ಹಿಂದೆ ನಮ್ಮ ಪೂರ್ವಜರು ವಾಸವಾಗಿದ್ದ ಸ್ಥಳದ ಜಮೀನಿಯ ಹಕ್ಕುಗಳನ್ನು ಗ್ರಾಮ ನಕ್ಷೆ ಮತ್ತು ದಾಖಲೆಗಳಲ್ಲಿ ಅಡಕಗೊಳಿಸುವ ಕೆಲಸ ಜಿಲ್ಲಾಡಳಿತದಿಂದ ಆಗಬೇಕು. ಯಾರೊಬ್ಬರು ನಮ್ಮ ಅಳಲು ಕೇಳುತ್ತಿಲ್ಲ, ಮತದಾನ ಬಹಿಷ್ಕರಿಸುವುದು ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲಕಾಲ ಸರ್ವೆ ದಾಖಲಾತಿ ಹಾಗೂ ಬಂದರು ಸ್ಥಳದ ವಿಚಾರವಾಗಿ ಅಧಿಕಾರಿಗಳು ಹಾಗೂ ಮೀನುಗಾರರ ಮದ್ಯೆ ವಾಗ್ವಾದ ನಡೆಯಿತು. ಮಲ್ಲುಕುರ್ವಾ ಶಾಲೆಯಿರುವ ಸ್ಥಳಕ್ಕು ಯಾವುದೇ ಆರ್ ಟಿಸಿ ದಾಖಲಾತಿ ಇರುವುದಿಲ್ಲ. ಕಂಪನಿಗೆ ಆರ್ ಟಿಸಿ ಕೊಡಲು ತಿಳಿಯುತ್ತದೆ. ಕೊನೆಪಕ್ಷ ಈ ಶಾಲೆಗಾದರು ದಾಖಲಾತಿ ನೀಡಿ ಎಂದು ಮಹಮದ್ ಕೋಯಾ ಸಭೆಯಲ್ಲಿ ಗಮನ ಸೆಳೆದರು. ಕೊನೆಗೆ ಡಿಸಿ ಗಂಗೂಬಾಯಿ ಮಾನಕರ್ ಅವರು ನಿಮ್ಮ ಬೇಡಿಕೆಗಳನ್ನು ಟಿಪ್ಪಣಿ ಮಾಡಿ ತಹಶಿಲ್ದಾರರಿಗೆ ಹಾಗೂ ತಮ್ಮ ಕಚೇರಿಗೆ ನೀಡಿ ಎಂದು ಮೀನುಗಾರರಿಗೆ ಹೇಳಿದರು. ಮೀನುಗಾರರಿಂದ ಮತದಾನ ಬಹಿಷ್ಕಾರ ಹಿಂಪಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಯಿತು…
ಈ ವೇಳೆ ಮಾತನಾಡಿದ ಮೀನುಗಾರ ಮುಖಂಡರಾದ ರಾಜೇಶ್ ತಾಂಡೇಲ್, ರಾಜು ತಾಂಡೇಲ್ ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ನಮ್ಮ ಮೇಲೆ ಸುಳ್ಳು ದೂರು ದಾಖಲಿಸುತ್ತಾರೆ. ನಮ್ಮನ್ನು ಕೇವಲ ಮತಕ್ಕೊಸ್ಕರ ಬಳಸಿಕೊಳ್ಳುವುದಾಗಿದೆ. ನಮ್ಮ ಹೋರಾಟ ಯಾರಿಗೂ ಕೇಳದಾಗಿದೆ. ನಮಗೆ ನ್ಯಾಯ ಕೊಡಲಾಗದಿದ್ರೆ, ದಯಾಮರಣ ನೀಡಿ ಎಂದು ಮಾಧ್ಯಮದ ಮೂಲಕ ಅಳಲು ತೊಡಿಕೊಂಡರು.
ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗ ಸಹಾಯಕ ಆಯುಕ್ತೆ ಡಾ.ನಯನಾ, ಡಿವೈ ಎಸ್ ಪಿ ಮಹೇಶ್ ಎಮ್ .ಕೆ, ತಹಶಿಲ್ದಾರ ರವಿರಾಜ್ ದೀಕ್ಷಿತ್, ಎಇಒ ಆನಂದ್, ಪಿಡಿಒ ಉದಯ್ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಕಾಸರಕೋಡ್ ವಾಣಿಜ್ಯ ಬಂದರು ವಿವಾದ ಸದ್ಯಕ್ಕೆ ಬಗೆಹರಿಯದ್ದಾಗಿದೆ. ರೊಚ್ಚಿಗೆದ್ದ ಮೀನುಗಾರರು ಮತದಾನ ಮಾಡಲ್ಲ ಎಂದು ಸರ್ಕಾರಕ್ಕೆ ಖಡಖ್ ಎಚ್ಚರಿಕೆ ರವಾನಿಸಿದ್ದಾರೆ. ಈ ವಿಚಾರ ಲೋಕಸಭಾ ಚುನಾವಣಾ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದನ್ನು ಕಾದು ನೋಡಬೇಕಿದೆ….