Lok Sabha Election 2024: ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವ್ಯಾಟ್ಸ್ ಆ್ಯಪ್‌ಗೆ ವಿಕಸಿತ ಭಾರತ ಅಭಿಯಾನದ ಸಂದೇಶ ಕಳುಹಿಸುವುದನ್ನು ನಿಲ್ಲಿಸಬೇಕು ಎಂದು ಚುನಾವಣಾ ಆಯೋಗ ಕೇಂದ್ರಕ್ಕೆ ಸೂಚಿಸಿದೆ.
ನವದೆಹಲಿ, ಮಾರ್ಚ್ 21 : ಲೋಕಸಭಾ ಚುನಾವಣೆ (Lok Sabha Election 2024)ಗೆ ದಿನಾಂಕ ಘೋಷಣೆಯಾಗಿದೆ. ಜತೆಗೆ ಮಾದರಿ ನೀತಿ ಸಂಹಿತೆಯೂ ಜಾರಿಯಾಗಿದೆ. ಈ ಮಧ್ಯೆ ವ್ಯಾಟ್ಸ್ ಆ್ಯಪ್‌ಗೆ ವಿಕಸಿತ ಭಾರತ ಅಭಿಯಾನ (Viksit Bharat Abhiyan)ದ ಸಂದೇಶ ಕಳುಹಿಸುವುದನ್ನು ನಿಲ್ಲಿಸಲು ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ (Election Commission of India) ಸೂಚನೆ ನೀಡಿದೆ. ಕೆಲವು ದಿನಗಳಿಂದ ದೇಶಾದ್ಯಂತದ ಜನರಿಗೆ ವ್ಯಾಟ್ಸ್ ಆ್ಯಪ್‌ನಲ್ಲಿ ವಿಕಸಿತ ಭಾರತಕ್ಕೆ ಸಂಬಂಧಿಸಿದ ಸಂದೇಶ ರವಾನೆಯಾಗುತ್ತಿದೆ.
ಈ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (Ministry of Electronics and Information Technology)ಕ್ಕೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಜತೆಗೆ ವರದಿಯನ್ನು ತಕ್ಷಣ ಸಲ್ಲಿಸುವಂತೆ ಚುನಾವಣಾ ಆಯೋಗವು ಸಚಿವಾಲಯವನ್ನು ಕೇಳಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೇಶದ ನಾಗರಿಕರ ಮೊಬೈಲ್ ಫೋನ್‌ಗಳಿಗೆ ಇಂತಹ ಸಂದೇಶಗಳು ರವಾನೆಯಾಗುತ್ತಿರುವುದು ತಿಳಿದು ಬಂದಿದೆ ಎಂದು ಚುನಾವಣಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.
ದೂರುಗಳು ಬಂದಿದ್ದವು
ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದರೂ ಸರ್ಕಾರದ ಉಪಕ್ರಮಗಳನ್ನು ಎತ್ತಿ ತೋರಿಸುವ ಇಂತಹ ಸಂದೇಶಗಳನ್ನು ನಾಗರಿಕರ ಫೋನ್‌ಗಳಿಗೆ ತಲುಪಿಸಲಾಗುತ್ತಿದೆ ಎಂದು ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಯೋಗವು ಈ ಕ್ರಮ ಕೈಗೊಂಡಿದೆ.
ಸಚಿವಾಲಯ ಹೇಳಿದ್ದೇನು?
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಬಗ್ಗೆ ಉತ್ತರಿಸಿ, ಮಾದರಿ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಈ ಸಂದೇಶಗಳನ್ನು ಕಳುಹಿಸಲಾಗಿತ್ತು. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅವರಿಗೆ ತಲುಪುವುದು ವಿಳಂಬವಾಗಿರಬಹುದು ಎಂದು ಆಯೋಗಕ್ಕೆ ಮಾಹಿತಿ ನೀಡಿದೆ.