ಅರುಣ್ ಕುಮಾರ್ ಪುತ್ತಿಲ ಇದೀಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಕಾರ್ಯಕರ್ತರ ಪಡೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಛೇರಿಗೆ ಆಗಮಿಸಿದ್ದರು. ಅರುಣ್ ಪುತ್ತಿಲ್ಗೆ ಬಿಜೆಪಿ ಶಾಲು ಹೊದಿಸಿ ಧ್ವಜವನ್ನ ನೀಡುವ ಮೂಲಕ ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು. ಈ ವೇಳೆ ಪುತ್ತಿಲ ಪರಿವಾರದವರಿಂದ ಗೂಂಡಾಗಿರಿ ಮಾಡಲಾಗಿದೆ.
ಮಂಗಳೂರು, ಮಾರ್ಚ್ 16: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ದೊಡ್ಡ ಸವಾಲಾಗಿದ್ದ ಅರುಣ್ ಕುಮಾರ್ ಪುತ್ತಿಲ (arun kumar puthila) ಇದೀಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಕಾರ್ಯಕರ್ತರ ಪಡೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಛೇರಿಗೆ ಆಗಮಿಸಿದ್ದರು. ಅರುಣ್ ಪುತ್ತಿಲ್ಗೆ ಬಿಜೆಪಿ ಶಾಲು ಹೊದಿಸಿ ಧ್ವಜವನ್ನ ನೀಡುವ ಮೂಲಕ ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು. ಈ ವೇಳೆ ಅರುಣ್ ಕುಮಾರ್ ಪುತ್ತಿಲ್ಗೆ ನೂರಾರು ಕಾರ್ಯಕರ್ತರ ಸಾಥ್ ನೀಡಿದರು. ಬಳಿಕ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರನ್ನು ಭೇಟಿ ಮಾಡಿದ್ದಾರೆ.
ಬಿಜೆಪಿ ಸೇರ್ಪಡೆ ಮೊದಲ ದಿನವೇ ಪುತ್ತಿಲ ಪರಿವಾರದ ಗೂಂಡಾಗಿರಿ: ಮಾಧ್ಯಮದವರ ಮೇಲೆ ದರ್ಪ
ಬಿಜೆಪಿ ಸೇರ್ಪಡೆ ಮೊದಲ ದಿನವೇ ಪುತ್ತಿಲ ಪರಿವಾರದವರಿಂದ ಗೂಂಡಾಗಿರಿ ಮಾಡಲಾಗಿದೆ. ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮದವರ ಮೇಲೆ ಪುತ್ತಿಲ ಪರಿವಾರದ ಸಂದೀಪ್ ಉಪ್ಪಿನಂಗಡಿ ಎಂಬಾತನಿಂದ ಪುಂಡಾಟ ಮಾಡಲಾಗಿದೆ. ವರದಿ ಮಾಡಲು ಹೋದ ಮಾಧ್ಯಮದವರನ್ನ ತಳ್ಳಾಡಿ, ಅನುಚಿತ ವರ್ತನೆ ತೋರಿದ್ದಾರೆ.
ಮಾಧ್ಯಮದವರು ಇಲ್ಲಿ ಬರುವುದು ಯಾಕೆ? ನಮಗೆ ಮಾಧ್ಯಮದವರ ಅವಶ್ಯಕತೆ ಇಲ್ಲ. ನಮಗೆ ಮಾಧ್ಯಮದವರ ಅಗತ್ಯವಿಲ್ಲ ನಾವು ಒಂದಾಗಿ ಆಯಿತು ಎಂದು ಬಿಜೆಪಿ ಸೇರ್ಪಡೆ ಮೊದಲ ದಿನವೇ ಅಹಂಕಾರ ಪ್ರದರ್ಶನ ಮಾಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಒಪ್ಪಿದರೂ ಪುತ್ತಿಲ ಸೇರ್ಪಡೆಗೆ ಪುತ್ತೂರು ಬಿಜೆಪಿಯಲ್ಲಿ ಅಪಸ್ವರ ಕೇಳಿಬಂದಿತ್ತು. ಆ ಮೂಲಕ ಹಿಂದೂ ನಾಯಕ ಅರುಣ್ ಪುತ್ತಿಲ ಬಿಜೆಪಿ ಎಂಟ್ರಿಗೆ ಮತ್ತೆ ವಿಘ್ನ ಎದುರಾಗಿತ್ತು. ಪುತ್ತೂರಿನ ಕೆಲ ಬಿಜೆಪಿ ನಾಯಕರ ಅಪಸ್ವರದಿಂದ ಪಕ್ಷ ಸೇರ್ಪಡೆ ಮತ್ತೆ ಗೊಂದಲ ಉಂಟಾಗಿತ್ತು. ಹೀಗಾಗಿ ಸಾಮಾಜಿಕ ತಾಣಗಳಲ್ಲಿ ಪುತ್ತಿಲ ಪರಿವಾರದ ವಕ್ತಾರ ಶ್ರೀಕೃಷ್ಣ ಉಪಾಧ್ಯಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಲ್ಲದೇ ಪುತ್ತಿಲ ವರ್ಸಸ್ ಬಿಜೆಪಿ ಗಲಾಟೆಯಲ್ಲಿ ಕೆಲ ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಾಗಿರುವ ಕೇಸ್ಗಳನ್ನು ವಾಪಾಸ್ ಪಡೆದು ಬಿಜೆಪಿ ಸೇರ್ಪಡೆಗೆ ಪಟ್ಟು ಹಿಡಿಯಲಾಗಿತ್ತು. ಬೆಂಗಳೂರಿನಲ್ಲೇ ಪುತ್ತಿಲ ಬಿಜೆಪಿ ಸೇರ್ಪಡೆ ಆಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ ಮಂಗಳೂರು ಕಚೇರಿಯಲ್ಲೇ ಸೇರ್ಪಡೆ ಅಂತ ಪುತ್ತಿಲ ತಂಡ ಸಿದ್ದವಾಗಿದ್ದರು. ಜೊತೆಗೆ ಅರುಣ್ ಪುತ್ತಿಲಗೆ ಮಂಡಲ ಅಧ್ಯಕ್ಷ ಸ್ಥಾನ ನೀಡದಂತೆ ಹಲವರು ಪಟ್ಟು ಹಿಡಿದಿದ್ದಾರೆ.