ಭಟ್ಕಳ, ಏಪ್ರಿಲ್, 30 : ತನ್ನ ಹೆಂಡತಿ ಹೆರಿಗೆಯಾದ ಸರ್ಕಾರಿ ಆಸ್ಪತ್ರೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ 15 ಸೀಲಿಂಗ್ ಫ್ಯಾನ್‌ಗಳನ್ನು ಆಸ್ಪತ್ರೆಗೆ ಉಡುಗರೆಯಾಗಿ ನೀಡಿದ ಅಪರೂಪದ ಸನ್ನಿವೇಶ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು.. ಕಳೆದ ಒಂದು ವಾರದ ಹಿಂದಷ್ಟೇ ಇಲ್ಲಿನ ಮಣ್ಕುಳಿಯ ಕಲ್ಮರ್ಗಿ ಮನೆ ನಿವಾಸಿ ಚಂದ್ರು ನಾರಾಯಣ ನಾಯ್ಕ ಅವರ ಪತ್ನಿ ಶೋಭಾ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ರು.
ತನ್ನ ಹೆಂಡತಿಯ ಹೆರಿಗೆಯನ್ನು ಸುಗಮವಾಗಿ ಮತ್ತು ತಾಯಿ ಮಗುವನ್ನು ಉತ್ತಮವಾಗಿ ಆರೈಕೆ ಮಾಡಿರುವುದ್ದಕ್ಕಾಗಿ ಚಂದ್ರು ಆಸ್ಪತ್ರೆಗೆ ಏನಾದರು ಉಡುಗೊರೆ ನೀಡಬೇಕೆಂದು ಯೋಚಿಸಿದ್ರು. ಇದೇ ವೇಳೆ ಸೀಲಿಂಗ್ ಪ್ಯಾನ್ ನೀಡಿದ್ರೆ, ಚೆನ್ನಾಗಿರುತ್ತೆ ಎನ್ನಿಸಿದೆ. ಹೀಗಾಗಿ ಚಂದ್ರು 15 ಸೀಲಿಂಗ್ ಫ್ಯಾನ್‌ಗಳನ್ನು ಆಸ್ಪತ್ರೆಗೆ ಉಡುಗೊರೆಯಾಗಿ ನೀಡಿದ್ದಾರೆ..
ಚಂದ್ರು ಕಾರ್ಯಕ್ಕೆ ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಪ್ರಶಂಸೆ ವ್ಯಕ್ತಪಡಿಸಿ ಕೃತಜ್ಞತಾ ಪತ್ರ ನೀಡಿದರು. ಈ ಸಂದರ್ಭದಲ್ಲಿ ಸ್ತ್ರೀ ರೋಗ ತಜ್ಞ ಡಾ. ಸಹನ್ ಕುಮಾರ್ ಮತ್ತು ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು. ಒಟ್ನಲ್ಲಿ ಚಂದ್ರು ಅಪರೂಪವಾಗಿ ಆಸ್ಪತ್ರೆಗೆ ಕೃತಜ್ಞತೆ ಸಲ್ಲಿಸುವ ಮೂಲಕ, ಹೀಗೂ ಸಾಮಾಜಿಕ ಕಳಕಳಿ ತೋರಿಸಬಹುದು ಅನ್ನೋದನ್ನು ನಿರೂಪಿಸಿದ್ದಾರೆ…