ಇದಕ್ಕೆಲ್ಲ ಹೆದರಿ ಓಡಿಹೋಗುವ ವ್ಯಕ್ತಿ ನಾನಲ್ಲ, ಇದೆಲ್ಲಾ ರಾಜಕೀಯ: ಹೆಚ್.ಡಿ. ರೇವಣ್ಣ

ಬೆಂಗಳೂರು: ”ಇದಕ್ಕೆಲ್ಲಾ ಹೆದರಿ ಓಡಿಹೋಗುವ ವ್ಯಕ್ತಿ ನಾನಲ್ಲ. ಕಾನೂನು ಪ್ರಕಾರ ಏನು ಕ್ರಮ ತಗೆದುಕೊಳ್ಳುತ್ತಾರೋ, ತೆಗೆದುಕೊಳ್ಳಲಿ” ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನ ದೇವೇಗೌಡರ ನಿವಾಸದ ಬಳಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ”ಈ ಸಮಯದಲ್ಲಿ ನಾನು ಯಾರ ಬಗ್ಗೆಯೂ ರಿಯಾಕ್ಟ್ ಮಾಡಲ್ಲ. ನಾಲ್ಕೈದು ವರ್ಷದ ಕಥೆ ತಂದು ಈಗ ದೂರು ಕೊಟ್ಟರೆ, ಎಸ್​​ಐಟಿ ತನಿಖೆಗೆ ಕೊಟ್ಟಿದ್ದಾರೆ. ಕೊಡಲಿ, ಈ ಸಮಯದಲ್ಲಿ ನಾನು ಏನೂ ಮಾತನಾಡಲ್ಲ. ಇದೆಲ್ಲಾ ರಾಜಕೀಯ, ತನಿಖೆ ನಡೆಸಲಿ” ಎಂದು ತಿರುಗೇಟು ನೀಡಿದರು.

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ”ಅವನು ಮಾಮೂಲಿಯಾಗಿ ವಿದೇಶಕ್ಕೆ ಹೋಗಬೇಕಿತ್ತು, ಹೋಗಿದ್ದಾನೆ‌. ಪ್ರಜ್ವಲ್​ಗೆ ತನ್ನ ವಿರುದ್ಧ ಎಫ್​ಐಆರ್ ದಾಖಲಾಗುವ ಬಗ್ಗೆ ಗೊತ್ತಿರಲಿಲ್ಲ. ಅವನೆಲ್ಲೇ ಇದ್ದರೂ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದಾಗ ಬರುತ್ತಾನೆ” ಎಂದರು. ”ಉಚ್ಚಾಟನೆ ಮಾಡುವುದು ಪಕ್ಷಕ್ಕೆ ಸೇರಿದ್ದು” ಎಂದು ಇದೇ ವೇಳೆ ಪ್ರತಿಕ್ರಿಯಿಸಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ, ”ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷವು ದೇವೇಗೌಡರ ಕುಟುಂಬದ ವಿರುದ್ಧ ಹಗೆತನ ಸಾಧಿಸುತ್ತಿದೆ. ನಮ್ಮ ಕುಟುಂಬಕ್ಕೆ ಇದು ಹೊಸದೇನಲ್ಲ, ಈ ಹಿಂದೆಯೂ ನಮ್ಮ ಕುಟುಂಬದ ವಿರುದ್ಧ ಸಿಐಡಿ, ಸಿಓಡಿ, ಸಿಬಿಐಯಂಥ ಸಂಸ್ಥೆಗಳಿಂದ ತನಿಖೆಗಳನ್ನು ಮಾಡಿಸಲಾಗಿದೆ” ಎಂದು ಹೇಳಿದರು.

”ಇಂಥವೆಲ್ಲಾ ದೇವೇಗೌಡರ ಕುಟುಂಬವನ್ನು 40 ವರ್ಷ ದಿಂದ ನೋಡಿದ್ದೇವೆ. ದೇವೇಗೌಡರ ಹತ್ತಿರ ಈ ವಿಚಾರ ಮಾತನಾಡಿಲ್ಲ. ಕಾನೂನು ರೀತಿ ಏನು ಕ್ರಮ ತೆಗೆದುಕೊಳ್ಳುತ್ತಾರೋ, ತೆಗೆದುಕೊಳ್ಳಲಿ” ಎಂದರು.