ಬೆಂಗಳೂರು: ಎಲೆಮರೆ ಕಾಯಿಯಂತೆ ಸಮಾಜಮುಖಿ ಕಾರ್ಯಗಳನ್ನು ಮಾಡುವ ವ್ಯಕ್ತಿತ್ವಗಳನ್ನು ಗುರುತಿಸಿ ಪ್ರಶಂಸಿಸುವುದರಲ್ಲಿ ಪ್ರಧಾನಿ ನರೇಂದರ ಮೋದಿ ಸದಾ ಮುಂದಿರುತ್ತಾರೆ. ಅವರ ಮನ್ ಕೀ ಬಾತ್ನಲ್ಲಿ ಇಂಥ ಬಹಳ ಪ್ರತಿಭೆಗಳ ಹೆಸರು ಪ್ರಸ್ತಾಪಿಸಿ ಜಗತ್ತು ಅವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ನೈಜ ಪ್ರತಿಭೆಗಳಿಗೆ ಪದ್ಮಪ್ರಶಸ್ತಿ ಸಿಕ್ಕಿವೆ. ಭಾಷಣಕ್ಕೆ ಯಾವುದಾದರೂ ಪ್ರದೇಶಕ್ಕೆ ಹೋದಾಗ ಮೋದಿ ಅವರು ಸಾಧ್ಯವಾದಾಗೆಲ್ಲ ಸ್ಥಳೀಯ ಪ್ರತಿಭೆಯನ್ನು ಗುರುತಿಸುತ್ತಾರೆ. ನಿನ್ನೆ ಭಾನುವಾರ ಪ್ರಧಾನಿಗಳು ಶಿರಸಿಗೆ ಹೋದಾಗ ಅಲ್ಲಿ ಹಣ್ಣು ಮಾರುವ ಮಹಿಳೆಯೊಬ್ಬರನ್ನು ಭೇಟಿ ಮಾಡಿದ್ದಾರೆ. ಭಾನುವಾರ ಮೋದಿ ಅವರು ಶಿರಸಿಯೂ ಸೇರಿ ನಾಲ್ಕು ಕಡೆ ರ‍್ಯಾಲಿ ನಡೆಸಿದ್ದರು. ಈ ವೇಳೆ ಹೆಲಿಪ್ಯಾಡ್ನಿಂದ ಸಮಾವೇಶ ಸ್ಥಳಕ್ಕೆ ಹೋಗುವಾಗ ಅವರು ಮೊದಲು ಭೇಟಿಯಾಗಿದ್ದು ಮೋಹಿನಿ ಗೌಡ ಎಂಬ ಈ ಮಹಿಳೆಯನ್ನೇ.
ಯಾರು ಈ ಮೋಹಿನಿ ಗೌಡ?
ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಂಕೋಲದಲ್ಲಿ ಮುಖ್ಯ ಬಸ್ ನಿಲ್ದಾಣದಲ್ಲಿ ಮೋಹಿನಿ ಗೌಡ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಜನರು ಹಣ್ಣು ತಿಂದು ರಸ್ತೆಯಲ್ಲಿ ಬಿಸಾಡುವ ಸಿಪ್ಪೆಯನ್ನು ಮೋಹಿನಿ ಅವರು ಹೆಕ್ಕಿ ಡಸ್ಟ್ ಬಿನ್ಗೆ ಎಸೆಯುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ್ ಯೋಜನೆಗೆ ಮೋಹಿನಿ ಗೌಡ ತರಹದವರು ಎಲೆಮರೆ ಕಾಯಿಯ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಇಂತಹವರು ಬೆಳಕಿಗೆ ಬಂದರೆ ಸಮಾಜದ ಇತರರಿಗೆ ಪ್ರೇರೇಪಣೆ ಸಿಕ್ಕಂತಾಗುತ್ತದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಮೋಹಿನಿ ಗೌಡರನ್ನು ಭೇಟಿ ಮಾಡಿದ್ದು ಮಹತ್ವದ ಸಂಗತಿ.
ನರೇಂದ್ರ ಮೋದಿ ರಾಜ್ಯ ಭೇಟಿ…
ಮೇ 7ರಂದು ರಾಜ್ಯದ ಅಂತಿಮ 14 ಕ್ಷೇತ್ರಗಳಿಗೆ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ನಿನ್ನೆ ಬೆಳಗಾವಿ, ದಾವಣಗೆರೆ, ಹೊಸಪೇಟೆ ಮತ್ತು ಶಿರಸಿಯಲ್ಲಿ ಮೋದಿ ಅವರು ಚುನಾವಣಾ ರ‍್ಯಾಲಿ ನಡೆಸಿದ್ದರು. ಇವತ್ತು ಸೋಮವಾರ ಬಾಗಲಕೋಟೆಯಲ್ಲಿ ಸಮಾವೇಶ ಉದ್ದೇಶಿಸಿ ಪ್ರಧಾನಿ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಲೂಟಿಕೋರ ಸರ್ಕಾರ ಎಂದು ಪ್ರಧಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿ ಮೇ 7ರಂದು ನಡೆಯುವ ಮತದಾನದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸುವಂತೆ ಕರೆ ನೀಡಿದ್ದಾರೆ.