ಅಯ್ಯೋ.. ಅನಂತ್‌ ಕುಮಾರ್‌ ಹೆಗಡೆಗೆ ಟಿಕೆಟ್‌ ಕೈ ತಪ್ಪಿತು..! ಎಡವಟ್ಟಾಗಿದ್ದೇಲ್ಲಿ..?

ಹೊನ್ನಾವರ, ಮಾರ್ಚ್‌ 24 : ಒಂದು ಕಲ್ಲು.. ಮೂರು ಹಕ್ಕಿ… ಮಾಜಿ ಕೇಂದ್ರ ಸಚಿವ.. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಅನಂತಕುಮಾರ ಹೆಗಡೆ ತಮ್ಮ ಸುದೀರ್ಘ ನಾಲ್ಕೂವರೆ ವರ್ಷಗಳ ಅಜ್ಞಾತವಾಸದಿಂದ ಇದ್ದಕ್ಕಿದ್ದಂತೆ ಧಿಗ್ಗನೆ ಎದ್ದು ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ ಕೈಗೊಂಡಿದ್ರು.

ಅನಂತ್‌ ಕುಮಾರ್‌ ಹೆಗಡೆ ಬರೀ ಪ್ರವಾಸ ಕೈಗೊಂಡಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಲೋಕಸಭೆ ಚುನಾವಣೆಗೆ ದಿನ ಗಣನೆ ಆರಂಭವಾಗಿರುವ ಈ ಹಂತದಲ್ಲಿ ಅನಗತ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸುವ ಮೂಲಕ ವಿವಾದಕ್ಕೂ ಕಾರಣರಾಗಿದ್ರು. ಮೇಲ್ನೋಟಕ್ಕೆ ಇದು ವಿವಾದ ಎನಿಸಿದರೂ ಇದರ ಹಿಂದೆ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆಯುವ ತಂತ್ರ ಅಡಗಿತ್ತು.

ಸ್ಥಳೀಯವಾಗಿ ಇರುವ ಪುರಾತನ ಮಸೀದಿಗಳನ್ನು ಒಡೆದು ಮಂದಿರ ನಿರ್ಮಿಸುವುದಾಗಿ ನೀಡಿದ ಪ್ರಚೋದನಕಾರಿ ಹೇಳಿಕೆ ವಿವಾದಗಳನ್ನು ಎಬ್ಬಿಸಿದ್ದು ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿಯ ನಾಯಕರ ಪೈಕಿ ಉಗ್ರ ಹಿಂದುತ್ವ ವಾದಿ ಎಂದೇ ಬಿಂಬಿತವಾದ ಅನಂತಕುಮಾರ್ ಹೆಗಡೆ ಭಟ್ಕಳದಲ್ಲಿ ದಶಕಗಳ ಹಿಂದೆ ನಡೆದ ಗಲಭೆ ಸಂದರ್ಭವನ್ನು ಬಳಸಿಕೊಂಡು ಹಿಂದೂ ನಾಯಕರಾಗಿ ಬೆಳೆದವರು.

ಹಾಗೆಯೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ಪ್ರಸಿದ್ಧರು. ಸ್ವತಹಾ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ಅವರ ಕರಾಟೆ ಕಲೆ ಒಂದೆರಡು ಬಾರಿ ಸ್ಥಳೀಯ ಸರ್ಕಾರಿ ಅಧಿಕಾರಿಗಳ ಮೇಲೂ ಪ್ರಯೋಗ ಆದದ್ದಿದೆ. ಸುಮಾರು ಮೂರು ದಶಕಗಳ ಹಿಂದೆ ಈಗಿನ ಮಾಜಿ ಮಂತ್ರಿ ಶಾಸಕ ಶಿವರಾಮ ಹೆಬ್ಬಾರ್ ಅವರ ಮೇಲೂ ತಮ್ಮ ಕರಾಟೆ ಕಲೆಯನ್ನೂ ಅವರು ಪ್ರದರ್ಶಿಸಿದ್ದರು.

ಲೋಕಸಭೆಗೆ ಬಿಜೆಪಿಯಿಂದ ಸತತವಾಗಿ ಆರು ಬಾರಿ ಆಯ್ಕೆಯಾಗುತ್ತಾ ಬಂದಿದ್ದಾರಾದರೂ, ಕೆನರಾ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಹೇಳಿಕೊಳ್ಳುವಂತಹದ್ದಲ್ಲ ಎನ್ನುತ್ತಾರೆ. ಆದ್ರೆ ಜಿಲ್ಲೆಯ ಅಭಿವೃದ್ದಿಗೆ ಅವರು ತಂದ ಮಹತ್ವದ ಯೋಜನೆಗಳು ಜಾರಿಯಾಗಲು ಕೆಲವರು ಬಿಡಲಿಲ್ಲ ಅನ್ನೋದು ಅಷ್ಟೇ ಸತ್ಯ. ಒಮ್ಮೆ ಬಿಜೆಪಿ ಸರ್ಕಾರದಲ್ಲಿ ಕೌಶಲ್ಯಾಭಿವೃದ್ದಿ ಖಾತೆಯ ಕೇಂದ್ರ ಮಂತ್ರಿಯೂ ಆಗಿದ್ದರು. ಸಚಿವ ಪದವಿ ಖಾತೆ ಸಿಕ್ಕ ಮರುಕ್ಷಣವೇ ಇದೊಂದು ಕೆಲಸವೇ ಇಲ್ಲದ ಖಾತೆ ಎಂದು ಸ್ವತಹಾ ಜರಿದಿದ್ದೂ ಉಂಟು. ಅಲ್ಲೂ ಮಹತ್ವದ ಸಾಧನೆಯನ್ನೇನೂ ಮಾಡಲಿಲ್ಲ. ಕಡೆಗೆ ಮಂತ್ರಿಗಿರಿಯೂ ಕೈ ತಪ್ಪಿತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ನಂತರ ಕ್ಷೇತ್ರದ ಜನರು ಅವರನ್ನು ನೋಡಿಯೇ ಇಲ್ಲ ಎನ್ನುತ್ತಾರೆ. ಇದೀಗ ಲೋಕಸಭೆಗೆ ಚುನಾವಣೆ ಘೋಷಣೆಯಾಗುವ ಹೊತ್ತಿನಲ್ಲಿ ದಿಢೀರನೆ ಅಜ್ಞಾತವಾಸದಿಂದ ಹೊರ ಬಂದು ಕ್ಷೇತ್ರದಾದ್ಯಂತ ಕಾರ್ಯಕರ್ತರ ಸಭೆ ನಡೆಸಿದ್ರು. ಆ ಸಭೆಗಳಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಹಿಂದುತ್ವದ ಉಗ್ರ ಭಾಷಣ ಮಾಡುವ ಮೂಲಕ ಸುದ್ದಿಯಾಗಿದ್ರು..

ರಾಜಕಾರಣದಿಂದ ನಾಲ್ಕೂವರೆ ವರ್ಷ ದೂರವೇ ಇದ್ದು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳುವುದಾಗಿ ಆತ್ಮೀಯರ ಬಳಿ ಹೇಳಿಕೊಂಡಿದ್ದ ಅವರು ಈಗ ಇದ್ದಕ್ಕಿದ್ದಂತೆ ಎದ್ದು ಕ್ರಿಯಾಶೀಲರಾಗಿರುವುದರ ಹಿಂದೆ ಮತ್ತೆ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗುವ ಉದ್ದೇಶವಿತ್ತು. ಆದರೆ ಈ ಅವಧಿಯಲ್ಲಿ ಪಕ್ಷದೊಳಗೇ ವಿರೋಧಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ರು. ಜತೆಗೇ ಪಕ್ಷದ ದಿಲ್ಲಿ ವರಿಷ್ಠರ ಅವ ಕೃಪೆಗೂ ಪಾತ್ರರಾಗಿದ್ರು ಎನ್ನಲಾಗಿದೆ.

ಹೀಗಾಗಿ ಅನಂತ್‌ಗೆ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನೀಡಲು ನಿರಾಕರಿಸಿತು ಅನ್ನೋ ಚರ್ಚೆ ಶುರುವಾಗಿದೆ. ಆದ್ರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಪರಿವರ್ತಿಸಿದ ಕೀರ್ತಿ ಅನಂತ್‌ ಕುಮಾರ್‌ಗೆ ಸಲ್ಲುತ್ತೆ. ಇಂದಿಗೂ ಅಪಾರ ಜನ ಬೆಂಬಲ ಹೊಂದಿರುವ ಅನಂತ್‌ ಕುಮಾರ್‌ಗೆ ಟಿಕೆಟ್‌ ಸಿಗದಿರೋದು ಉತ್ತರ ಕನ್ನಡದಲ್ಲಿ ಬಹುತೇಕರ ನಿರಾಸೆಗೆ ಕಾರಣವಾಗಿದೆ ಅನ್ನೋದು ಸುಳ್ಳಲ್ಲ…