ಭಟ್ಕಳ :- ತಾಲೂಕಿನ ಮೂಢ ಭಟ್ಕಳ ಬೈಪಾಸ್ ಬ್ರಿಡ್ಜ್ ಸಮೀಪ ಕಾರು ಹಾಗೂ ಲಾರಿಯ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಮೃತ ಮಹಿಳೆಯನ್ನು ರೀಟಾ ಡಿಸೋಜಾ ಎಂದು ಗುರುತಿಸಲಾಗಿದ್ದು, ರೀಟಾ ಡೀಸೋಜಾ ಅವರ ಪತಿ ಜೇವಿಯರ್ ರಾಜ್ ಡಿಸೋಜಾ ಮತ್ತು ಪುತ್ರಿ ಇನ್ರಿಕಾ ಡಿಸೋಜಾ ಗಂಭೀರವಾಗಿ ಗಾಯಗೊಂಡಿದ್ದಾರೆ…
ಜೇವಿಯರ್ ಡಿಸೋಜಾ ಕಾರಿನಲ್ಲಿ ತಮ್ಮ ಪತಿ ಹಾಗೂ ಮಗಳೊಂದಿಗೆ ಉಡುಪಿ ಕಡೆಯಿಂದ ಗೋವಾ ಕಡೆಗೆ ಹೋಗುವ ವೇಳೆ ಮುರುಡೇಶ್ವರ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಅಪಘಾತವಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ತಕ್ಷಣ ಕಾರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಗಾಯಾಳುಗಳನ್ನು ಸ್ಥಳೀಯರು ರಕ್ಷಣೆ ಮಾಡಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾಳೆ. ಹಾಗೂ ಮೃತ ಮಹಿಳೆಯ ಪತಿ ಹಾಗೂ ಪುತ್ರಿ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉದಯ್ ನಾಯ್ಕ, ನುಡಿಸಿರಿ ನ್ಯೂಸ್, ಭಟ್ಕಳ