ಭಟ್ಕಳ : ಸಮುದ್ರದಲ್ಲಿ ಮುಳುಗುತ್ತಿದ್ದವನನ್ನು ರಕ್ಷಿಸಿದ 7ನೇ ತರಗತಿ ಬಾಲಕ

ಭಟ್ಕಳ ಮೇ,1 : ಕಳೆದ ಒಂದು ವಾರದ ಹಿಂದೆ ತನ್ನ ಅಜ್ಜಿ ಮನೆಗೆ ಬೇಸಿಗೆ ರಜೆ ಕಳೆಯಲು ಬಂದ 10ನೇ ತರಗತಿ ಓದುತ್ತಿದ್ದ ಬಾಲಕ  ಸಮುದ್ರದಲ್ಲಿ ಮುಳುಗುತ್ತಿದ್ದ ವೇಳೆ,  ಅದೇ ಊರಿನ 7ನೇ ತರಗತಿ ಬಾಲಕನೋರ್ವ  ರಕ್ಷಣೆ ಮಾಡಿದ ಘಟನೆ ತಾಲೂಕಿನ ಮಾವಿನಕುರ್ವೆ ಪಂ.ವ್ಯಾಪ್ತಿಯ ತಲಗೋಡಿನ  ಸಮುದ್ರ ತೀರದಲ್ಲಿ ನಡೆದಿದೆ.

ಕುಂದಾಪುರ ತಾಲೂಕಿನ ಗಂಗೊಳ್ಳಿ ಮೂಲದ ಬಾಲಕನಾದ ಧ್ರುವ ಲಕ್ಷ್ಮಣ ಖಾರ್ವಿ ತನ್ನ ಬೇಸಿಗೆ ರಜೆಯನ್ನು ಕಳೆಯಲು ಮಾವಿನಕುರ್ವೆ ಪಂ.ವ್ಯಾಪ್ತಿಯ ತಲಗೋಡಿನಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ. ಈ ವೇಳೆ ಮಧ್ಯಾಹ್ನ ಯಾರು ಇಲ್ಲದ ವೇಳೆ ಆಟವಾಡಲು ಸಮುದ್ರ ತೀರಕ್ಕೆ ತೆರಳಿದ್ದಾನೆ. ನಂತರ ಸಮುದ್ರಕ್ಕೆ ಇಳಿದು ಈಜಲು ಹೋಗಿದ್ದಾಗ ಅಲೆಯ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ. ತನ್ನ ಪ್ರಾಣ ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ.

ಇದೆ ವೇಳೆ ಅಲ್ಲೇ ಸಮುದ್ರ ತೀರಕ್ಕೆ ಆಟವಾಡಲು ಬಂದಿದ್ದ ಅದೇ ಊರಿನ ಸರಕಾರಿ ಪ್ರಾಥಮಿಕ ಶಾಲೆ ಕರಿಕಲ್‌ನಲ್ಲಿ 7 ನೇ ತರಗತಿ ಓದುತ್ತಿದ್ದ ಶ್ರೀಕರ ಪುರಂದರ ತನ್ನ ಇನೊಬ್ಬ ಗೆಳೆಯನೊಂದಿಗೆ ಅಪಾಯಕ್ಕೆ ಸಿಲುಕಿದ್ದ ಧ್ರುವನ ಪ್ರಾಣ ರಕ್ಷಣೆ ಮಾಡಿದ್ದಾನೆ. ಈ ಬಾಲಕನ ಈ ಸಾಧನೆಗೆ ತಾಲೂಕಿನಾದ್ಯಂದ ಪ್ರಶಂಸೆ ಹರಿದು ಬರ್ತಿದ್ದು, ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆ ತನ್ನ ಮಗನ ಪ್ರಾಣ ಉಳಿಸಿದ ದ್ರುವನ ತಂದೆ ತಾಯಿ ಶ್ರೀಕರ್‌ನಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಪಾಯದಲ್ಲಿದ್ದವನನ್ನು ರಕ್ಷಣೆ ಮಾಡಲು ಶ್ರೀಕರ ಪುರಂದರ ತೋರಿದ ಧೈರ್ಯ, ಮಾಡಿದ ಸಾಹಸ ಮಾತ್ರ ಶ್ಲಾಘನೀಯವಾಗಿದೆ.