ಮೇ 12ಕ್ಕೆ ಗಾಂವಕರ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮ

ಅಂಕೋಲಾ: 2012ರಲ್ಲಿ ಸ್ಥಾಪನೆಯಾದ ಗಾಂವಕರ ಮೆಮೋರಿಯಲ್ ಫೌಂಡೇಶನ್ ದಿ.ಬೊಮ್ಮಯ್ಯ ಗಾಂವಕರರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಒಂದೆಡೆ ದಾಖಲು ಮಾಡಿ ಬಹುಮುಖಿ ಪುಸ್ತಕವನ್ನು ಪ್ರಕಟಿಸಿದೆ. ಕಳೆದ 11 ವರ್ಷಗಳಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಉತ್ತರ ಕನ್ನಡ ಜಿಲ್ಲೆಯ 102 ಪ್ರತಿಭೆಗಳನ್ನು ಯುವ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಇದರಿಂದಾಗಿ ಯುವ ಜನಾಂಗಕ್ಕೆ ಉತ್ತೇಜನೆ ನೀಡುವಂತಾಗಿದೆ ಎಂದು ಫೌಂಡೇಶನ ಅಧ್ಯಕ್ಷ ದೇವಾನಂದ ಬಿ. ಗಾಂವಕರ ಹೇಳಿದರು.


ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಮೇ.12ರಂದು ಭಾನುವಾರ ಸಂಜೆ 4 ಗಂಟೆಗೆ ಇಲ್ಲಿನ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಹಮ್ಮಿಕೊಂಡಿರುವ 12ನೇ ವರ್ಷದ ಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ವಿಶ್ವದ ಮೊದಲ ಮಹಿಳಾ ರುದ್ರವೀಣಾ ವಾದಕಿ ವಿದುಷಿ ಜ್ಯೋತಿ ಹೆಗಡೆ ಶಿರಸಿ ಕಾರ್ಯಕ್ರಮ ಉದ್ಘಾಟಿ ಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ವಹಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥರಾದ ಸೋಮಶೇಖರ ವಿಶ್ವನಾಥ ದೇಸಾಯಿ, ಬೆಂಗಳೂರಿನ ಅಸಿಸ್ಟಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಆಡಳಿತ) ಡಾ. ಸುಮನ್ ಡಿ. ಫೆನ್ನೆಕರ್ ಯುವ ಜನಾಂಗ-ಭವಿಷ್ಯದ ಭಾರತ ಉಪನ್ಯಾಸ ನೀಡಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 10 ತಾಲೂಕುಗಳ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಯುವ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದರು.
ಕವಿಯತ್ರಿ ಅಕ್ಷತಾ ಕೃಷ್ಣಮೂರ್ತಿ ಮಾತನಾಡಿ, ಚರಿತ್ರೆಯಲ್ಲಿ ಅಮರಳಾದ ಅಂಕೋಲಾ ಕಣಗೀಲದ ಕಾಣ ಬೊಮ್ಮಕ್ಕನ ಸ್ಮರಣೆ ಹಾಗೂ ವಿದ್ಯಾ ಸಂಸ್ಥೆಗಳಿಗೆ ಪುಸ್ತಕ ಕೊಡುಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಶುಭಂ ಓಂಕಾರ ಅಣ್ವೇಕರ ಕಾರವಾರ (ಸ್ಮರಣ ಶಕ್ತಿ), ಶ್ರೀಶಾ ಶಿವಕುಮಾರ ಎಚ್.ಅಂಕೋಲಾ (ಯಕ್ಷಗಾನ), ಶ್ವೇತಾ ಸಂಜು ಅಣ್ಣಿಕೆರಿ ಹಳಿಯಾಳ (ಕುಸ್ತಿ), ಸಂದೇಶ ಕೃಷ್ಣ ಹರಿಕಂತ್ರ ಕುಮಟಾ, (ಕ್ರೀಡೆ), ಸೋನಾಲಿ ವೇಳಿಪ ಜೋಯಿಡಾ (ಪರ್ವತಾರೋಹಣ), ಸ್ಫೂರ್ತಿ ನಾಯಕ ಶಿರಸಿ (ಸಾಹಿತ್ಯ), ಶ್ಯಾಮಸುಂದರ ಸಿದ್ದಾಪುರ (ಈಜು), ಪ್ರಸನ್ನ ಶೇಟ್ ಹೊನ್ನಾವರ (ಸೃಜನಶೀಲತೆ), ಡಾ.ಸಜೀಲಾ ಯಾಹ್ಯಕೋಲಾ ಭಟ್ಕಳ (ಫ್ಯಾಷನ್), ಬಸವರಾಜ ಈರಯ್ಯ ನಡುವಿನಮನಿ ಮುಂಡಗೋಡ (ಕೃಷಿ) ಇವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದರು.


ಈ ವೇಳೆ ಅಕ್ಷಯ ಆರ್.ಗಾಂವಕರ, ಭರತರಾಜ ಡಿ.ಗಾಂವಕರ, ಪ್ರಜ್ಞಾ ಎನ್.ನಾಯಕ ಬೆಂಗ ಳೂರು, ವಿನಯ ಆರ್.ನಾಯಕ, ವನಿತಾ ಡಿ.ಗಾಂವಕರ, ಗೋಪಾಲ ಆರ್.ನಾಯಕ, ಮುಕುಂದ ಎಂ. ನಾಯಕ, ಸಚಿನ ಗುನಗಾ, ಗಣಪತಿ ಗಾಂವಕರ, ಎಂ.ಎಂ ಮಹಾಂತೇಶ ರೇವಡಿ, ಡಾ. ಕರುಣಾಕರ, ಗೌರೀಶ ನಾಯಕ, ಜಯಪ್ರಕಾಶ ಪಾಟೇಲ್, ಸಚಿನ್ ಗುನಗಾ, ಮೂರ್ತಿ ಗಾಂವಕರ, ಸಾತು ಎನ್.ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.