ಗೇರುಸೊಪ್ಪಾ ವೃತ್ತದ ಸಮೀಪ ಗ್ಯಾಸ್ ಟ್ಯಾಂಕರ್ ಪಲ್ಟಿ

ಹೊನ್ನಾವರ: ಪಟ್ಟಣದ ಗೇರುಸೊಪ್ಪಾ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಅಡ್ಡಲಾಗಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಆತಂಕ ಸೃಷ್ಟಿಸಿದೆ. ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಮಂಗಳೂರಿನಿಂದ ಹುಬ್ಬಳ್ಳಿಗೆ ಸಂಚರಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ವಾಹನದ ಒಂದು ಬದಿ ಜಖಂ ಆಗಿದೆ. ಅನಿಲ ಸೋರಿಕೆ ಆಗಿರಬಹುದೆಂಬ ಶಂಕೆಯಿಂದ ಸಮೀಪದ ಅಂಗಡಿ ಮುಂಗಟ್ಟು ಹಾಗೂ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅನಾಹುತ ಸಂಭವಿಸಿದಂತೆ ಮುಂಜಾಗೃತೆವಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ಕ್ಕೆ ಅಡ್ಡಲಾಗಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಎಲ್ಲಾ ವಾಹನಗಳು ಹೆದ್ದಾರಿಯಲ್ಲಿ ಸಾಲಾಗಿ ನಿಂತಿವೆ. ಅನಿಲ ಟ್ಯಾಂಕರ್ ಪಲ್ಟಿಯಾದ ಸ್ಥಳದ ಸಮೀಪ ಯಾವುದೇ ವಾಹನ ಸಂಚಾರವಾಗದಂತೆ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಯವರು ಕಾರ್ಯಪೃವೃತ್ತರಾಗಿದ್ದಾರೆ.

ಮೊದಲು ಇದೇ ಸ್ಥಳದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿತ್ತು. ಪುನಃ ಅದೇ ಸ್ಥಳದಲ್ಲಿ ವಾಹನ ಪಲ್ಟಿಯಾಗಿದೆ. ಭಟ್ಕಳ ಮಾರ್ಗದಿಂದ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಿದ್ದು, ಪಟ್ಟಣದ ಒಳಭಾಗದಿಂದ ಬದಲಿ ಮಾರ್ಗ ಕಲ್ಪಿಸಲಾಗಿದೆ. ಹೆದ್ದಾರಿಯಲ್ಲಿ ಬಂದ್ ಆಗಿದ್ದು, ಟ್ಯಾಂಕರ್ ಮೇಲೆತ್ತುವರೆಗೂ ಸಂಚಾರ ನಿರ್ಬಂಧಿಸಲಾಗಿದೆ.