ದಾನಗಳಲ್ಲಿ ರಕ್ತದಾನವೇ ಶ್ರೇಷ್ಠ: ಆರ್. ಪಿ. ನಾಯ್ಕ.

ಕಾರವಾರ: ರಕ್ತದಾನವೇ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠದಾನವಾಗಿದೆ. ಇದು ಅನೇಕ ಜೀವಗಳನ್ನು ಉಳಿಸಲು ಸಹಾಯಕವಾಗಿದೆ. ಜೀವ ಇದ್ದರೆ ಮಾತ್ರ ನಾವು ಎಲ್ಲಾ ದಾನಗಳನ್ನು ಮಾಡಲು ಸಾಧ್ಯ ಎಂದು ಕಾರವಾರ ನಗರಸಭೆಯ ಪೌರಾಯುಕ್ತ ಆರ್. ಪಿ ನಾಯ್ಕ್ ಹೇಳಿದರು.

ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣಾರ್ಥ ಮಂಗಳವಾರದಂದು ನಗರದ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಆರ್. ಎಂ. ಓ. ಡಾ. ವೆಂಕಟೇಶ ಮಾತನಾಡಿ ಸಂಘ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುವುದರಿಂದ ರೋಗಿಗಳಿಗೆ ರಕ್ತವನ್ನು ಪೂರೈಸಲು ಸಹಾಯಕವಾಗುತ್ತದೆ. ಇವರ ಕಾರ್ಯ ಶ್ಲಾಘನಿಯ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ. ಎಸ್. ಕಿನ್ನರಕರ್, ಸಮಾಜ ಸೇವಕ ನಜೀರ್ ಅಹ್ಮದ್ ಯು. ಶೇಖ್ ಮಾತನಾಡಿದರು. ಅತಿಥಿಗಳಾಗಿ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಕಲ್ಲೂರ್, ಪ್ರೇಮಾಶ್ರಮ ಚಾರಿಟೇಬಲ್ ಟ್ರಸ್ಟ್ ನ ಸೀತಾರಾಮ ಗಾಂವ್ಕರ್, ವಿನೋದ್ ನಾಯ್ಕ್ ಹಾಗೂ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಸಂದೀಪ್ ಯಾದವ್ ಇದ್ದರು.

ಕ್ಲಬ್ ನ ಅಧ್ಯಕ್ಷ ಮೊಹಮ್ಮದ್ ಉಸ್ಮಾನ್ ಶೇಖ್ ಕಾರ್ಯಕ್ರಮ ಸಂಘಟಿಸಿದ್ದರು. ಶಿಬಿರದಲ್ಲಿ ಆಜಾದ್ ಯೂಥ್ ಕ್ಲಬ್ ನ ಸಾಧಿಕ್ ಖಾನ್, ಮನೋಜ್ ಆಚಾರಿ, ಸಾಹಿಲ್ ಕೆಲಕೊಂಡ್, ನಾಮದೇವ ಎಸ್. ವಾಲ್ವೇಕರ್ ಮತ್ತಿತರರು ರಕ್ತದಾನ ಮಾಡಿದರು.