ಉತ್ತರ ಕನ್ನಡ: ಕಳೆದ ಕೆಲ ದಿನಗಳಿಂದ ಬೆಂಬಿಡದೇ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ಜಿಲ್ಲೆಯ ಜನ ಹೈರಾಣಾಗಿದ್ದಾರೆ. ಇನ್ನು ಗುಡ್ಡ ಕುಸಿತದಿಂದ ಜನರು ಬದುಕುವುದೇ ಕಷ್ಟ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅಬ್ಬರದ ಮಳೆಗೆ ಹಲವು ಭಾಗಗಳಲ್ಲಿ ಗುಡ್ಡ ಕುಸಿತವಾಗಿದೆ. ಮಳೆಯಿಂದ ಏನೆಲ್ಲಾ ಅನಾಹುತಗಳಾಯ್ತು ಅನ್ನುವ ಕುರಿತು ಒಂದು ವಿಸ್ತೃತ ವರದಿ.!
ಹೊನ್ನಾವರದ ಅಪ್ಸರಕೊಂಡದಲ್ಲಿ 64 ಕುಟುಂಬಗಳ ಸ್ಥಳಾಂತರ
ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಅಪ್ಸರಕೊಂಡ ಗ್ರಾಮದಲ್ಲಿ ಗುಡ್ಡ ಕುಸಿಯುತ್ತಿದ್ದು, ಕಲ್ಲುಬಂಡೆಗಳು ಬಿರುಕುಬಿಟ್ಟು ಬೀಳುವ ಹಂತ ತಲುಪಿದೆ. ಹೀಗಾಗಿ ಗುಡ್ಡದ ತಳಭಾಗದ ಕೆಳಗಿನೂರು ಮತ್ತು ಅಪ್ಸರಕೊಂಡದ 64 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಬಿರುಕು ಬಿಟ್ಟ ಕಲ್ಲುಬಂಡೆ.!
750 ಮೀಟರ್‌ಗೂ ಹೆಚ್ಚು ಗುಡ್ಡ ಬಿರುಕು ಬಿಟ್ಟು ಕಲ್ಲುಬಂಡೆಗಳು ಬೀಳುವ ಅಪಾಯ ಎದುರಾಗಿದೆ. ಸ್ಥಳಕ್ಕೆ ಗಣಿ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ ನಂತರ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಅಪಾಯದಲ್ಲಿ ಗ್ರಾಮಸ್ಥರು
ಅಪ್ಸರಕೊಂಡ ಗ್ರಾಮದಲ್ಲಿ 150 ಕ್ಕೂ ಹೆಚ್ಚು ಮನೆಗಳಿದ್ದು, 1700 ಕ್ಕೂ ಹೆಚ್ಚು ಜನರಿದ್ದಾರೆ. ಬಹುತೇಕ ಕುಟುಂಬದವರು ಕೃಷಿಕರಾಗಿದ್ದು, ಸ್ಥಳಾಂತರಗೊಳ್ಳಲು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರತಿಬಾರಿ ಗುಡ್ಡ ಪ್ರದೇಶದಿಂದ ಮಳೆಯ ನೀರು ಹರಿದುಬರುತ್ತದೆ. ಆದರೆ ಗ್ರಾಮದಲ್ಲಿ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆಯಿಲ್ಲ. ಹೀಗಾಗಿ ನೀರು ಹರಿದುಹೋಗಲು ಅಗತ್ಯ ವ್ಯವಸ್ಥೆ ಮಾಡಬೇಕು. ಜೊತೆಗೆ ಕುಸಿಯುತ್ತಿರುವ ಭಾಗದ ಗುಡ್ಡವನ್ನು ಸಮತಟ್ಟುಮಾಡಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜೋಯಿಡಾ ತಾಲೂಕಿನ ಅಣಶಿ ಘಟ್ಟ ಬಂದ್.!
ಜೋಯಿಡಾ ತಾಲೂಕಿನ ಅಣಶಿ ಘಟ್ಟದ ರಾಜ್ಯ ಹೆದ್ದಾರಿಯಲ್ಲಿ ಕೆಲದಿನಗಳ ಹಿಂದೆ ಗುಡ್ಡ ಕುಸಿದು ಸಂಚಾರ ನಿರ್ಬಂಧಿಸಲಾಗಿತ್ತು. ಈಗ ಮತ್ತೆ ಸುರಿದ ಭಾರೀ ಮಳೆಯಿಂದ ರಾಜ್ಯ ಹೆದ್ದಾರಿ 34 ರಲ್ಲಿ ಗುಡ್ಡ ಕುಸಿದಿದ್ದು, ಬೆಳಗಾವಿ-ಕಾರವಾರ ರಸ್ತೆ ಬಂದ್ ಮಾಡಲಾಗಿದೆ.
ಒಟ್ಟಿನಲ್ಲಿ ಕಳೆದ ಹತ್ತು ದಿನದಿಂದ ಬೆಂಬಿಡದೇ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಜನರನ್ನ ಹೈರಾಣಾಗಿಸಿದ್ದು, ಗುಡ್ಡ ಕುಸಿತದಿಂದ ಜನರು ಬದುಕುವುದೇ ಕಷ್ಟ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.