ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿರುವ ಶಾಸಕ ಶಿವರಾಮ್ ಹೆಬ್ಬಾರ್ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಸೇರ್ಪಡೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಂಬಂಧ ಇಂದು ಉತ್ತರ ಕನ್ನಡದ ಶಿರಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪರ-ವಿರೋಧಗಳು ವ್ಯಕ್ತವಾದವು. ಅಲ್ಲದೆ, ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು.
ಕಾರವಾರ, ಮಾರ್ಚ್ 25: ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿರುವ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಸೇರ್ಪಡೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಂಬಂಧ ಇಂದು ಉತ್ತರ ಕನ್ನಡದ ಶಿರಸಿಯಲ್ಲಿ (Sirsi) ಕಾಂಗ್ರೆಸ್ (Congress) ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪರ-ವಿರೋಧಗಳು ವ್ಯಕ್ತವಾದವು. ಅಲ್ಲದೆ, ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು.
ಶಿರಸಿ ತಾಲೂಕಿನ ಹುಸರಿಯ ಪಾಂಡುರಂಗ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಸಭೆಯ ಬಳಿಕ ಕಾರ್ಯಕರ್ತರ ನಡುವೆಯೇ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ ಪರ- ವಿರೋಧ ವಿಚಾರದಲ್ಲಿ ವಾಗ್ವಾದ ನಡೆಯಿತು. ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ಹೆಬ್ಬಾರ್ ಹಾಗೂ ಬೆಂಬಲಿಗರಿಗೆ ಸ್ವಾಗತ ಅಂದರೆ ಹಲವರು ವಿರೋಧ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಈ ಸಭೆ ನಡೆಸಲಾಗಿದೆ. ಸಭೆಯ ಬಳಿಕ ಸಭಾಭವನದ ಹೊರಕ್ಕೆ ಹೆಬ್ಬಾರ್ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆದು ಆಗುವುದಾದರೆ ಹೆಬ್ಬಾರ್ ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರಲಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಬ್ಬಾರ್ ಹಾಗೂ ಬೆಂಬಲಿಗರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಪಕ್ಷ ಹಾಳಾಗುತ್ತದೆ ಎಂದು ಹಲವರು ಹೇಳಿದ್ದಾರೆ. ಇದು ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಯಿತು.
ಕಾಂಗ್ರೆಸ್ ಕಾರ್ಯಕರ್ತರ ಜಗಳ ತೀವ್ರತೆ ಪಡೆಯುತ್ತಿದ್ದಂತೆ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಅವರು ಎಲ್ಲರನ್ನೂ ಸಮಾಧಾನ ಪಡಿಸಲು ಯತ್ನಿಸಿದರು. ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ನಿಯಂತ್ರಿಸುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಅವರಿಗೆ ಭೀಮಣ್ಣ ನಾಯ್ಕ್ ಎಚ್ಚರಿಕೆ ನೀಡಿದರು. ಭೀಮಣ್ಣ ಎಂಟ್ರಿ ಬಳಿಕ ಪರಿಸ್ಥಿತಿ ಹತೋಟಿಗೆ ಮರಳಿತು.
ನಾಡಿದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಶಿವರಾಮ್ ಹೆಬ್ಬಾರ್ ಮತ್ತು ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಲು ಯೋಜನೆ ಹಾಕಲಾಗಿತ್ತು. ಇದೇ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಪ್ರಾರಂಭವಾಗಿ ಅತೀರೇಕಕ್ಕೆ ಹೋಗಿತ್ತು.