Monkey Pox : ಮಂಗನ ಕಾಯಿಲೆಗೆ ವೃದ್ಧರೇ ಹೆಚ್ಚಾಗಿ ಟಾರ್ಗೆಟ್ ಆಗುತ್ತಿದ್ದು, ಚಿಕ್ಕಮಗಳೂರಲ್ಲಿ ಮತ್ತೊಂದು ಬಲಿಯಾಗಿದೆ. ವೃದ್ಧೆಯೊಬ್ಬರು ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು, ಮಾರ್ಚ್ 25 : ಮಂಗನ ಕಾಯಿಲೆಗೆ ಕಾಫಿನಾಡು ಚಿಕ್ಕಮಗಳೂರಲ್ಲಿ ಮತ್ತೊಂದು (Monkey Pox) ಬಲಿಯಾಗಿದೆ. ಕೊಪ್ಪ ತಾಲೂಕಿನ ಬಿಂತ್ರವಳ್ಳಿ ಗ್ರಾಮದ ರತ್ನ (68) ಎಂಬುವವರು ಮೃತಪಟ್ಟಿದ್ದಾರೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ರತ್ನ ಅವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ರಕ್ತ ಪರೀಕ್ಷೆಯಲ್ಲಿ ಮಂಗನ ಕಾಯಿಲೆ ಇರುವುದು ದೃಢವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 4ಕ್ಕೆ ಏರಿಕೆ ಆಗಿದೆ.
ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಮಂಗನಕಾಯಿಲೆ ಹೆಚ್ಚುತ್ತಿದೆ. ಕೊಪ್ಪ , ಎನ್‌ಆರ್ ಪುರ, ಶೃಂಗೇರಿ ತಾಲೂಕಿನಲ್ಲಿ ಕಾಯಿಲೆ ಹೆಚ್ಚುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ11 ಕೆಎಫ್‌ಡಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಮಂಗನ ಕಾಯಿಲೆ?
ಮಂಗನ ಕಾಯಿಲೆ ವೈರಾಣು (Kyasanur Forest Disease) ಸೋಂಕಿತ ಉಣ್ಣೆ ಮರಿಗಳು (ನಿಂಫ್) ಕಚ್ಚುವುದರಿಂದ ಹರಡುವ ವೈರಲ್ ಜ್ವರವಾಗಿದೆ. ಈ ಕಾಯಿಲೆಯು ಸಾಮಾನ್ಯವಾಗಿ ನವೆಂಬರ್‌ನಿಂದ ಮೇ ತಿಂಗಳ ಅವಧಿಯಲ್ಲಿ ಕಂಡು ಬರುತ್ತದೆ. ಹಠಾತ್ ಜ್ವರ, ಶರೀರದಲ್ಲಿ ತೀವ್ರವಾದ ಸ್ನಾಯುಗಳ ನೋವು, ತಲೆನೋವು ಬರುವುದು ಇದರ ರೋಗ ಲಕ್ಷಣಗಳಾಗಿವೆ. ಮಂಗನ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಕೆಎಫ್‌ಡಿ ಪೀಡಿತ 12 ಜಿಲ್ಲೆಗಳಿದ್ದು, ಈ ವರ್ಷದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಜನವರಿ 1 ರಿಂದ ಮಾ. 22 ರವರೆಗೆ ರಾಜ್ಯದಲ್ಲಿ 8,556 ಕೆಎಫ್‌ಡಿ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ 214 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ 148 ಮಂದಿ ಗುಣಮುಖರಾಗಿದ್ದರೆ, 9 ಮಂದಿ ಮೃತಪಟ್ಟಿದ್ದಾರೆ. 57 ಸಕ್ರಿಯ ಪ್ರಕರಣಗಳಿವೆ. ಶಿವಮೊಗ್ಗದಲ್ಲಿ 49 , ಉತ್ತರ ಕನ್ನಡ 78 ಹಾಗೂ ಚಿಕ್ಕಮಗಳೂರಲ್ಲಿ 86 ಹಾಗೂ ಉಡುಪಿಯಲ್ಲಿ 1 ಪ್ರಕರಣಗಳು ವರದಿಯಾಗಿವೆ.