RCB vs PBKS: ಕೊಹ್ಲಿಯ ಕಾಲು ಹಿಡಿದ ಹುಚ್ಚು ಅಭಿಮಾನಿ ವಿರುದ್ಧ ದಾಖಲಾಯ್ತು ಕೇಸ್, ರಾಯಚೂರಿನ ಅಪ್ರಾಪ್ತ ಬಂದಿದ್ಹೇಗೆ ಗೊತ್ತೇ?

ಹುಚ್ಚು ಅಭಿಮಾನದಿಂದ ಭದ್ರತಾ ಉಲ್ಲಂಘನೆ ಮಾಡಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿಯ ಕಾಲು ಹಿಡಿದಿದ್ದ ಅಭಿಮಾನಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆತನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. ಆತ ಯಾರು? ಎಲ್ಲಿಂದ ಬಂದಿದ್ದ? ಕೊಹ್ಲಿ ಕ್ರೀಸ್​ಗೆ ಹೋಗುತ್ತಿದ್ದಂತೆ ಗ್ರಿಲ್ ಹಾರಿ ಮೈದಾನಕ್ಕೆ ನುಗ್ಗಿದ್ದರ ಬಗ್ಗೆ ಆತ ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಮಾರ್ಚ್​ 26: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಸೋಮವಾರ ರಾತ್ರಿ ನಡೆದ ಆರ್​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​ (RCB vs PBKS) ನಡುವಣ ಐಪಿಎಲ್ (IPL) ಪಂದ್ಯ ಭದ್ರತಾ ಉಲ್ಲಂಘನೆಗೂ ಸಾಕ್ಷಿಯಾಗಿತ್ತು. ಆರ್​ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್​ಗೆ ಕ್ರೀಸ್​ಗೆ ಬರುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಕ್ರೀಡಾಂಗಣದ ಗ್ರಿಲ್ ಹಾರಿ ಕ್ರೀಸ್​ ಬಳಿ ಬಂದು ಕೊಹ್ಲಿಯ ಕಾಲು ಹಿಡಿದಿದ್ದ! ತಕ್ಷಣ ಆತನನ್ನು ವಶಕ್ಕೆ ಪಡೆದಿದ್ದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಆ ವ್ಯಕ್ತಿ ಯಾರು? ಆತ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬಂದಿದ್ದು ಹೇಗೆ, ಆತನ ಉದ್ದೇಶ ಏನಿತ್ತು ಎಂಬ ಎಲ್ಲ ವಿವರವನ್ನು ಪೊಲೀಸರು ಕಲೆ ಹಾಕಿದ್ದಾರೆ. ಅಲ್ಲದೆ, ಆತನ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದಾರೆ.

ಮೈದಾನಕ್ಕೆ ನುಗ್ಗಿ ಕೊಹ್ಲಿಯ ಕಾಲು ಹಿಡಿದಿದ್ದ ಅಭಿಮಾನಿಯ ವಿಚಾರಣೆ ನಡೆಸಲಾಗಿದ್ದು, ಆತ ರಾಯಚೂರಿನಿಂದ ಬಂದಿದ್ದ ಅಪ್ರಾಪ್ತ ಎಂಬುದು ತಿಳಿದುಬಂದಿದೆ. ರೈಲಿನಲ್ಲಿ ರಾಯಚೂರಿನಿಂದ ಬಂದಿದ್ದ 17 ವರ್ಷದ ಅಪ್ರಾಪ್ತ, 3000 ರೂಪಾಯಿ ಕೊಟ್ಟು ಡಿ ಬ್ಲಾಕ್ ಟಿಕೆಟ್ ಖರೀದಿ ಮಾಡಿದ್ದ. ಈತ ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿಯಾಗಿದ್ದಾನೆ.

ಕೊಹ್ಲಿ ಕ್ರೀಸ್​ಗೆ ಹೋಗುತ್ತಿದ್ದಂತೆ ನಡೆದಿದ್ದೇನು?
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್​​ ತಂಡ ನೀಡಿದ್ದ 177 ರನ್​ಗಳ ಗೆಲುವಿನ ಗುರಿಯನ್ನು ಬೆನ್ನತ್ತಲು ಕೊಹ್ಲಿ ಹಾಗೂ ಡುಪ್ಲೆಸಿಸ್ ಕ್ರೀಸ್​ಗೆ ತೆರಳುತ್ತಿದ್ದರು. ಅಷ್ಟರಲ್ಲಿ ಯುವಕ ಮೈದಾನಕ್ಕೆ ಜಿಗಿದಿದ್ದ. ಆ ಬಗ್ಗೆ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿರುವ ಆತ, ಕೊಹ್ಲಿ ಕ್ರೀಸ್​ಗೆ ಹೋಗುತ್ತಿದ್ದಂತೆ ಹಿಂಬದಿ ಸೀಟ್​​ನಲ್ಲಿದ್ದವರು ‘ಕೊಹ್ಲಿಯನ್ನು ಹಿಡಿದುಕೋ’ ಎಂದು ಕೂಗುತ್ತಿದ್ದರು. ಅದನ್ನು ಕೇಳಿದ ತಕ್ಷಣ ಗ್ರಿಲ್​ ಹಾರಿ ಮೈದಾನದ ಒಳಗೆ ನುಗ್ಗಿದ್ದೆ ಎಂದಿದ್ದಾನೆ.

ಇದೀಗ ರಾಯಚೂರಿನ ಅಪ್ರಾಪ್ತನ ಮೇಲೆ ಕಬ್ಬನ್ ಪಾರ್ಕ್​ ಠಾಣೆ ಪೊಲೀಸರು ಕರ್ತವ್ಯಕ್ಕೆ ಅಡ್ಡಿ, ಮೈದಾನಕ್ಕೆ ಅತಿಕ್ರಮಣ ಪ್ರವೇಶದಡಿ ಕೇಸ್ ದಾಖಲಿಸಿದ್ದಾರೆ. ಕೇಸ್ ದಾಖಲಿಸಿಕೊಂಡು ಆತನ ವಿಚಾರಣೆ ನಡೆಸಲಾಗುತ್ತಿದೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 77 ರನ್ ಗಳಿಸಿ ಆರ್​​ಸಿಬಿ ಗೆಲುವಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಕೊಹ್ಲಿ ಇನ್ನಿಂಗ್ಸ್​ನಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್​​ಗಳು ಒಳಗೊಂಡಿದ್ದವು. ಅದಕ್ಕೂ ಮೊದಲು ಫೀಲ್ಡಿಂಗ್​​ನಲ್ಲಿ ಸಹ ಕೊಹ್ಲಿ ಮಿಂಚಿದ್ದರು. ಪಂದ್ಯವನ್ನು ಆರ್​ಸಿಬಿ ತಂಡ 4 ವಿಕೆಟ್​ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿರುವ ಆರ್​ಸಿಬಿ ಒಂದರಲ್ಲಿ ಸೋಲನುಭವಿಸಿದ್ದು, ಇನ್ನೊಂದರಲ್ಲಿ ಗೆಲುವು ಸಾಧಿಸಿದಂತಾಗಿದೆ.