ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್​ಗೆ ಜಲಕಂಟಕ; ಪಂದ್ಯಗಳ ಸ್ಥಳಾಂತರಕ್ಕೆ ಆಗ್ರಹ

ಬೆಂಗಳೂರಿನಲ್ಲಿ ಹನಿ ನೀರಿಗೂ ಪರದಾಡುವಂತಾಗಿದೆ. ಜೀವಜಲಕ್ಕಾಗಿ ಜನ ಪ್ರತಿ ದಿನ ಹೋರಾಡ್ತಿದ್ದಾರೆ.‌ ಸಿಲಿಕಾನ್ ಸಿಟಿಗೆ ಎದುರಾಗಿರುವ ಭೀಕರ ಬರದ ಎಫೆಕ್ಟ್ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಮೇಲೆಯೂ ತಟ್ಟುವ ಆತಂಕ ಮೂಡಿದ್ರೆ ಇತ್ತ ಐಟಿ ಎಂಪ್ಲಾಯಿಸ್ ಗಳು ನೀರಿನ ಸಮಸ್ಯೆ ಮುಗಿಯುವವರೆಗೂ ನಾವು ನಮ್ಮೂರಿಗೆ ಹೋಗ್ತಿವಿ ವರ್ಕ್ ಫ್ರಂ ಹೊಂ ಕೊಡಿ ಅಂದ್ರೆ ವಾಟಾಳ್ ನಾಗರಾಜ್ ಮಾತ್ರ ಎಂದಿನಂತೆ ತಮ್ಮ ಡಿಫರೆಂಟ್ ಸ್ಟೈಲ್ ನಲ್ಲಿ ಖಾಲಿ ಬಿಂದಿಗೆ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು, ಮಾರ್ಚ್ 11 : ಕ್ರಿಕೆಟ್ ಹಬ್ಬ ಐಪಿಎಲ್​ಗೆ (IPL) ದಿನಗಣನೆ ಆರಂಭವಾಗಿದೆ. ಆರ್​ಸಿಬಿ ಆಟ ನೋಡಲು ಅಭಿಮಾನಿಗಳು ಕಾತರಾಗಿದ್ದಾರೆ. ಹೈವೋಲ್ಟೆಜ್ ಕದನದ ರೋಚಕತೆಯನ್ನ ಸ್ಟೇಡಿಯಂನಲ್ಲಿ ಕೂತು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಎದುರಾಗಿರುವ ಭೀಕರ ಬರದ (Drinking Water Crisis) ಪರಿಣಾಮ ಐಪಿಎಲ್ ಮೇಲೆ ಬೀಳುವ ಆತಂಕ ಮೂಡಿದೆ‌. ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಕ್ಕೂ ಎದುರಾಗುತ್ತಾ ಜಲಕಂಟಕ ಅನ್ನೋ ಪ್ರಶ್ನೆ ಮೂಡಿದೆ.‌ ಮಾರ್ಚ್ 22ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ಗ್ರ್ಯಾಂಡ್ ಓಪನ್ ಆಗುತ್ತಿದೆ . ಮಾರ್ಚ್ 29ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಮ್ಯಾಚ್ ನೋಡಲು ಜನ ಕಾತರಾಗಿದ್ದಾರೆ.‌ ಇಂತಹ ವೇಳೆ ಟ್ವಿಟರ್ ನಲ್ಲಿ ಅಭಿಯಾನವೊಂದು ಶುರುವಾಗಿದೆ‌. ಬೆಂಗಳೂರಿನಲ್ಲಿ ನಡೆಯುವ ಐಪಿಎಲ್‌ ಮ್ಯಾಚ್ ಕ್ಯಾನ್ಸಲ್‌ ಮಾಡಿ ಬೇರೆ ಕಡೆಗೆ ಶಿಫ್ಟ್ ಮಾಡಿ ಅಂತ ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಹಾಗೆ ಗೃಹ ಸಚಿವರಿಗೆ ಟ್ಯಾಗ್ ಮಾಡಿ ಈ ಮನವಿ ಮಾಡಲಾಗಿದೆ.

ಐಪಿಎಲ್​ಗೆ ಜಲಕಂಟಕ
ಒಂದು ಮ್ಯಾಚ್ ನಡೆಸಲು ಲಕ್ಷಾಂತರ ಲೀಟರ್ ನೀರು ಬೇಕಾಗುತ್ತದೆ.‌ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಜನರು ಪರದಾಡ್ತಿದ್ದಾರೆ. ಹೀಗಾಗಿ ಈ ವರ್ಷ ಆಯೋಜನೆ ಆಗಿರುವ ಪಂದ್ಯ ಕ್ಯಾನ್ಸಲ್ ಮಾಡಿ ಬೇರೆ ಕಡೆ ಶಿಫ್ಟ್ ಗೆ ಆಗ್ರಹ ಕೇಳಿ ಬಂದಿದೆ. 2016ರಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಇದ್ದ ಕಾರಣ ಪಂದ್ಯ ಶಿಫ್ಟ್ ಆಗಿದ್ದವು. ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ಬೆಂಗಳೂರಿಗೆ 7 ಪಂದ್ಯ ಶಿಫ್ಟ್ ಆಗಿದ್ವು.‌ ಈಗ ಬೆಂಗಳೂರಿಗೆ ಬರಗಾಲ ಬಂದಿದೆ ಬೇರೆ ಕಡೆಗೆ ಶಿಫ್ಟ್ ಮಾಡಿ ಅಂತ ಅಭಿಯಾನ ಶುರುವಾಗಿದೆ. ಅಲ್ಲದೆ ಹೈಕೋರ್ಟ್ ಗೆ ಪಿಎಎಲ್ ಸಲ್ಲಿಕೆಗೂ ಸಿದ್ದತೆ ನಡೆದಿದೆ.

ಇನ್ನು ಇತ್ತ ಬೆಂಗಳೂರಿನಲ್ಲಿ‌ ದಿನೆದಿನೇ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವರ್ಕ್ ಫ್ರಂ ಹೋಂಗೆ ಟೆಕ್ಕಿಗಳು ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನ ಹಲವು ಭಾಗದಲ್ಲಿ‌ ನೀರಿನ‌ ಸಮಸ್ಯೆ ಶುರುವಾಗಿದೆ. ಹೀಗಾಗಿ ಅಪಾರ್ಟ್ಮೆಂಟ್ ನಲ್ಲಿರುವ ಟೆಕ್ಕಿಗಳಿಂದ ವರ್ಕ್ ಫ್ರಂ ಹೋಂಗೆ ಬೇಡಿಕೆ ಆರಂಭವಾಗಿದ್ದು, ಸಿಎಂಗೂ ಪೋಸ್ಟ್ ಮಾಡಿದ್ದಾರೆ. ಬೇಸಿಗೆ ಮುಗಿಯುವವರೆಗೂ ಊರಿಗೆ ತೆರಳಲು ಪ್ಲಾನ್ ಕೊಂಡಿದ್ದು, ಸದ್ಯ ಮಕ್ಕಳ ಪರೀಕ್ಷೆ ನಡೆಯುತ್ತಿದ್ದು, ಎಕ್ಸಾಂ ಮುಗಿದ‌ ನಂತರ ಏಪ್ರಿಲ್ ನಿಂದ ಬಹುತೇಕ ಐಟಿ ಉದ್ಯೋಗಿಗಳು ಊರಿನಿಂದಲೇ ಕೆಲಸ ನಿರ್ವಹಿಸಲು ನಿರ್ಧಾರಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಕೆಲ ಕಂಪನಿಗಳು ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡುವ ಬಗ್ಗೆ ಬೋರ್ಡ್ ಮೀಟಿಂಗ್ ನಲ್ಲಿ ಚರ್ಚೆ ಮಾಡಿ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಒಟ್ನಲ್ಲಿ ರಾಜಧಾನಿ ಬೆಂಗಳೂರಲ್ಲಿ ಕುಡಿಯಲು ನೀರಿಲ್ಲದೆ ನಿವಾಸಿಗಳು ಪರದಾಡುತ್ತಿದ್ದಾರೆ. ಐಪಿಎಲ್ ಶಿಫ್ಟ್ ಮಾಡಬೇಕೆಂದು ಅಭಿಯಾನ ಆರಂಭವಾಗಿದ್ರೆ, ಇತ್ತ ಐಟಿಬಿಟಿ ನೌಕರರು ಅಪಾರ್ಟ್ಮೆಂಟ್ ಗಳಲ್ಲಿ ನೀರಿಲ್ಲ ನಮಗೆ ವರ್ಕ್ ಫ್ರಂ ಹೋಂ ಬೇಕು ಅಂತ ಮನವಿ ಮಾಡಿದ್ರೆ ವಾಟಾಳ್ ನಾಗರಾಜ್ ಮಾತ್ರ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟದ್ದು ಸರಿಯಲ್ಲ ಈ ತಿಂಗಳ ಇಪ್ಪತ್ತರಂದು ದೊಡ್ಡ ಮಟ್ಟದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಆದರೆ ರಾಜ್ಯ ‌ಸರ್ಕಾರ ಈ ಎಲ್ಲವನ್ನೂ ಹೇಗೆ ಪರಿಗಣಿಸುತ್ತೋ ಎಂದು ಕಾದು ನೋಡಬೇಕಿದೆ.