Rahul Dravid : ಆಟಗಾರರು ಪರಸ್ಪರ ನೆರವು ನೀಡುವುದರಿಂದ ಮಾತ್ರ ತಂಡದ ಯಶಸ್ಸು ಸಾಧ್ಯ ಎಂದು ದ್ರಾವಿಡ್ ಹೇಳಿದ್ದಾರೆ.
ಬೆಂಗಳೂರು ಮಾರ್ಚ್ 10 : ರೋಹಿತ್ ಶರ್ಮಾ ಪಡೆ ಇಂಗ್ಲೆಂಡ್ ವಿರುದ್ಧ (Ind vs Eng) ಇನ್ನಿಂಗ್ಸ್ ಮತ್ತು 64 ರನ್ಗಳ ಗೆಲುವು ದಾಖಲಿಸಿದ ನಂತರ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲಾ ಆಟಗಾರರಿಗೆ ಪ್ರೇರಣಾದಾಯ ಭಾಷಣ ಮಾಡಿದರು. ಆಟಗಾರರು ಮಾಡಿದ ಪ್ರಯತ್ನಗಳ ಬಗ್ಗೆ ಹೆಮ್ಮೆಯಿದೆ ಎಂದು ದ್ರಾವಿಡ್ ಹೇಳಿದ್ದಾರೆ. ಅವರ ಭಾಷಣದ ವಿಡಿಯೊ ಇದೀಗ ವೈರಲ್ ಆಗಿದೆ.
ಇದು ಏರಿಳಿತಗಳಿಂದ ತುಂಬಿದ ಸರಣಿಯಾಗಿತ್ತು. ಚೊಚ್ಚಲ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ರಾಹುಲ್ ದ್ರಾವಿಡ್ ಪ್ರತಿಯೊಬ್ಬ ಆಟಗಾರನ ಪ್ರಯತ್ನಗಳನ್ನು ಸಂಪೂರ್ಣವಾಗಿ ಶ್ಲಾಘಿಸಿದರು. 4-1 ಸರಣಿ ಗೆಲುವಿಗೆ ಪ್ರತಿಯೊಬ್ಬರ ಕೊಡುಗೆಯೂ ಇದೆ ಎಂದು ಹೇಳಿದರು.
3 ತಿಂಗಳ ಸುದೀರ್ಘ ಸರಣಿಗಾಗಿ 51 ವರ್ಷದ ಮಾಜಿ ಆಟಗಾರ ತಂಡದ ಸಹಾಯಕ ಸಿಬ್ಬಂದಿಯನ್ನು ಅಭಿನಂದಿದರು. ಭಾರತವು ಹಿರಿಯ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಶಮಿ ಅವರ ಅನುಪಸ್ಥಿತಿಯಲ್ಲಿತ್ತು. ಆದರೂ ಯುವ ಆಟಗಾರರು ಕೆಚ್ಚೆದೆಯಿಂದ ಆಡಿ ಪಂದ್ಯವನ್ನು ಗೆಲ್ಲಿಸಿದ್ದರು.
“ಮೊದಲನೆಯದಾಗಿ,ನಿಮ್ಮೆಲ್ಲರಿಗೂ, ತಂಡಕ್ಕೆ, ಆಟಗಾರರಿಗೆ ಮತ್ತು ಸಹಾಯಕ ಸಿಬ್ಬಂದಿಗೆ ದೊಡ್ಡ ಅಭಿನಂದನೆಗಳು. ಸರಣಿಯಲ್ಲಿ ನಾವು ನಿಜವಾಗಿಯೂ ಸವಾಲನ್ನು ಎದುರಿಸಿದ್ದೇವೆ. ಆದಾಗ್ಯೂ ಪುಟಿದೇಳಲು ಪುನರಾಗಮನ ಮಾಡಲು ಒಂದು ಮಾರ್ಗ ಕಂಡುಕೊಂಡೆವು. ಇದು ನಮ್ಮಲ್ಲಿರುವ ಕೌಶಲಗಳನ್ನು ಎತ್ತಿ ತೋರಿಸುತ್ತದೆ ಎಂದ ಹೇಳಿದರು.
ಪರಸ್ಪರ ಸಹಾಯ ಮಾಡುವಂತೆ ಸಲಹೆ
ರಾಹುಲ್ ದ್ರಾವಿಡ್ ತಮ್ಮ ಭಾಷಣದಲ್ಲಿ ಹೇಳಿದ ಅತ್ಯುತ್ತಮ ವಿಷಯವೆಂದರೆ ಯಾವಾಗಲೂ ಒಟ್ಟಿಗೆ ಉಳಿಯುವ ಮತ್ತು ಪರಸ್ಪರ ಸಹಕಾರ ನೀಡುವ ಬಗ್ಗೆ. ತಂಡದ ಪ್ರತಿಯೊಬ್ಬರೂ ಪರಸ್ಪರ ಸಹಾಯ ಮಾಡಬೇಕು ಮತ್ತು ಪರಸ್ಪರರ ಯಶಸ್ಸಿಗೆ ಕೊಡುಗೆ ನೀಡಬೇಕು ಎಂದು ದ್ರಾವಿಡ್ ಸಲಹೆ ನೀಡಿದರು.
ದ್ರಾವಿಡ್ ಎಲ್ಲಾ ಆಟಗಾರರಿಗೆ ಯಾವಾಗಲೂ ನಿಸ್ವಾರ್ಥವಾಗಿರಲು ಮತ್ತು ತಂಡದ ಸಹ ಆಟಗಾರನಿಗೆ ಏನಾದರೂ ಸಹಾಯ ಮಾಡಲು ಸಿದ್ಧರಿರಬೇಕು ಎಂದು ಹೇಳಿದರು. ಹೀಗೆ ಮಾಡುವುದರಿಂದ, ಪ್ರತಿಯೊಬ್ಬರೂ ಯಶಸ್ಸಿನ ಹಾದಿಯಲ್ಲಿರುತ್ತಾರೆ ಎಂದು ಹೇಳಿದರು.
“ನಿಮ್ಮಲ್ಲಿ ಬಹಳಷ್ಟು ಯುವ ಆಟಗಾರರಿಗೆ, ಈ ತಂಡಕ್ಕೆ ಬರಲು ಯಶಸ್ವಿಯಾಗಲು ಪರಸ್ಪರರ ಅಗತ್ಯವಿದೆ. ನೀವು ಬ್ಯಾಟರ್ ಆಗಿರಲಿ ಅಥವಾ ಬೌಲರ್ ಆಗಿರಲಿ, ನಿಮ್ಮ ಯಶಸ್ಸು ಇತರರ ಯಶಸ್ಸಿನೊಂದಿಗೆ ಸಂಬಂಧ ಹೊಂದಿದೆ. ನೀವೆಲ್ಲರೂ ಪರಸ್ಪರರ ಯಶಸ್ಸಿನಲ್ಲಿ ನೆರವು ಕೊಡಬೇಕು ಎಂದು ಹೇಳಿದರು.