Shubman Gill: ಮಗನ ಶತಕ ಕಂಡು ಗ್ಯಾಲರಿಯಲ್ಲಿ ಸಂಭ್ರಮಾಚರಣೆ ಮಾಡಿದ ತಂದೆ

ಶುಭಮನ್​ ಗಿಲ್​ ಶತಕ ಬಾರಿಸಿದ ತಕ್ಷಣ ಗ್ಯಾಲರಿಯಲ್ಲಿ ಕುಳಿತಿದ್ದ ಅವರ ತಂದೆ ಸುಖ್ವಿಂದರ್ ಮಗನ ಸಾಧನೆ ಕಂಡು ಸಂಭ್ರಮಿಸಿದ್ದಾರೆ.

ಧರ್ಮಶಾಲಾ: ಇಂಗ್ಲೆಂಡ್​ ವಿರುದ್ಧದ ಧರ್ಮಶಾಲಾ ಟೆಸ್ಟ್​ನಲ್ಲಿ ಶುಭಮನ್​ ಗಿಲ್​ ಅವರು ಶತಕ ಬಾರಿಸಿ ಮಿಂಚಿದ್ದಾರೆ. ಮಗನ ಶತಕವನ್ನು ಕಂಡು ಅವರ ತಂದೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮಿಸಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ. 26 ರನ್​ ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಗಿಲ್​​ ಅವರು ರೋಹಿತ್​ ಜತೆಗೂಡಿ ಉತ್ತಮ ಜತೆಯಾಟ ನಡೆಸಿದರು.

ಹೊಡಿಬಡಿ ಆಟವಾಡಿದ ಶುಭಮನ್​ ಗಿಲ್​ ಅವರು ಅನುಭವಿ ಜೇಮ್ಸ್​ ಆ್ಯಂಡರ್ಸನ್​ ಅವರ ಎಸೆತದಲ್ಲಿ ಬಾರಿಸಿದ ಸೊಗಸಾದ ಸಿಕ್ಸರ್​ ಒಂದನ್ನು ಕಂಡು ಎದುರಾಳಿ ತಂಡದ ಆಟಗಾರರು ಕೂಡ ಚಪ್ಪಾಳೆ ತಟ್ಟಿ ಪ್ರಶಂಸಿಸಿದರು. ಒಟ್ಟು 150 ಎಸೆತಗಳಲ್ಲಿ 110 ರನ್ ಬಾರಿಸಿದರು. ಅವರ ಸೆಂಚುರಿ ಇನ್ನಿಂಗ್ಸ್​​​ನಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್​​​ ಸಿಡಿಯಿತು. ಮಗನ ಶತಕವನ್ನು ಕಂಡು ತಂದೆಯೂ ಕೂಡ ಸಂಭ್ರಮಾಚರಿಸಿದರು. ತನ್ನ ಎಲ್ಲ ಕ್ರಿಕೆಟ್ ಸಾಧನೆಗಳಿಗೆ ತನ್ನ ತಂದೆ ಸುಖ್ವಿಂದರ್ ಅವರ ತ್ಯಾಗವೇ ಕಾರಣ ಎಂದು ಹಿಂದೆಮ್ಮೆ ಸಂದರ್ಶನದಲ್ಲಿ ಗಿಲ್​ ಹೇಳಿದ್ದರು.

ಇದು ಶುಭಮನ್​ ಗಿಲ್​ ಅವರ 4 ಟೆಸ್ಟ್​ ಶತಕವಾಗಿದೆ. ಸದ್ಯ ಭಾರತ ಪರ 46 ಇನಿಂಗ್ಸ್​ ಆಡಿ 1492* ರನ್​ ಬಾರಿಸಿದ್ದಾರೆ. 6 ಅರ್ಧಶತಕ ಕೂಡ ಒಳಗೊಂಡಿದೆ.

ಶುಭಮನ್ ಪಂಜಾಬಿನ ಜಲಾಲಾಬಾದ ಎಂಬ ಸಣ್ಣ ನಗರದಲ್ಲಿ ಒಬ್ಬ ಸಾಮಾನ್ಯ ರೈತನ ಕುಟುಂಬದಿಂದ ಬಂದವರು. ಆತನ ತಂದೆ ಸುಖವಿಂದರ್ ಮಗನ ಕ್ರಿಕೆಟ್ ಪ್ರತಿಭೆಗೆ ಆಧಾರವಾಗಿ ನಿಂತದ್ದು ನಿಜವಾಗಿಯೂ ಗ್ರೇಟ್! ತನ್ನ ಫಲವತ್ತಾದ ಗದ್ದೆಯನ್ನು ಲೆವೆಲ್ ಮಾಡಿ ಕ್ರಿಕೆಟ್ ಪಿಚ್ ಮಾಡಿ ತನ್ನ ಮಗನ ನೆರವಿಗೆ ನಿಂತವರು ತಂದೆ ಸುಖ್ವಿಂದರ್! ಇಡೀ ದಿನ ಅಪ್ಪನೇ ಬೌಲರ್ ಮತ್ತು ಮಗನೇ ಬ್ಯಾಟರ್!

ಅಪ್ಪ ಹೇಳುವ ಪ್ರಕಾರ ಶುಭಮನ್‌ಗೆ ಮೂರನೇ ವಯಸ್ಸಲ್ಲೇ ಕ್ರಿಕೆಟ್ ಆಸಕ್ತಿ ಮೂಡಿತ್ತು! ರಾತ್ರಿ ಮಲಗುವಾಗ ಕ್ರಿಕೆಟ್ ಬ್ಯಾಟ್ ಮತ್ತು ಬಾಲನ್ನು ತನ್ನ ಹಾಸಿಗೆಯ ಪಕ್ಕದಲ್ಲಿ ಇಟ್ಟು ಮಲಗುತ್ತಿದ್ದ. ಈ ಪ್ರತಿಭೆಯ ನೆರವಿಗೆ ಅಪ್ಪ ನಿಂತರು ಅನ್ನೋದು ಕ್ರಿಕೆಟಿನ ಭಾಗ್ಯ! ಮಗನ ಕ್ರಿಕೆಟ್ ಭವಿಷ್ಯ ರೂಪಿಸಲು ಊರಿನ ಕೃಷಿ ಭೂಮಿಯನ್ನು ಮಾರಿ ಮೊಹಾಲಿಗೆ ಬಂದವರು ಅಪ್ಪ. ಅಲ್ಲಿ ಬಾಡಿಗೆ ಮನೆ ಹಿಡಿದು ಮಗನ ಕ್ರಿಕೆಟ್ ಪ್ರತಿಭೆಗೆ ಆಧಾರವಾಗಿ ನಿಂತವರು ಅವರು! ಶುಭಮನ್ ತನ್ನ ತಂದೆಯ ಕನಸಿಗೆ ರೆಕ್ಕೆ ಮೂಡಿಸಿ ಬೆಳೆಯುತ್ತ ಹೋದರು.