Viral Video: ದೆಹಲಿಯ ರಸ್ಯೆಯಲ್ಲಿ ನಮಾಜ್ ಮಾಡುತ್ತಿವರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ನವದೆಹಲಿ: ದೆಹಲಿಯ ಇಂದ್ರಲೋಕ್‌ನ (Delhi’s Inderlok) ಮೆಟ್ರೋ ಸ್ಟೇಷನ್ ಸಮೀಪದ ಬೀದಿಯ ರಸ್ತೆಯಲ್ಲಿ ಶುಕ್ರವಾರದ ನಮಾಜ್ ಮಾಡುತ್ತಿದ್ದ ಮುಸ್ಲಿಮರಿಗೆ ಒದ್ದ ದೆಹಲಿ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಪೊಲೀಸ್ ಅಧಿಕಾರಿ ಮುಸ್ಲಿಮರನ್ನು ಒದೆಯುತ್ತಿರುವ ವಿಡಿಯೊ ವೈರಲ್ (Viral Video) ಆಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಸೂಕ್ತ ಕ್ರಮಕ್ಕಾಗಿ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದರು. ಉತ್ತರ ಡಿಸಿಪಿ ಮನೋಜ್ ಮೀನಾ (DCP North Manoj Meena) ಈ ಬಗ್ಗೆ ಮಾತನಾಡಿ, ʼʼಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದೇವೆ. ಘಟನೆಯ ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದುʼʼ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರ ಖಂಡನೆ
ಕಾಂಗ್ರೆಸ್ ನಾಯಕಿ ಸುಪ್ರಿಯಾ ಈ ವೈರಲ್ ವಿಡಿಯೊವನ್ನು ಹಂಚಿಕೊಂಡು, “ಅಮಿತ್ ಶಾ ಅವರ ದೆಹಲಿ ಪೊಲೀಸರ ಧ್ಯೇಯ ವಾಕ್ಯ ಶಾಂತಿ, ಸೇವೆ, ನ್ಯಾಯ…” ಎಂದು ವ್ಯಂಗ್ಯವಾಡಿದ್ದಾರೆ. ಜತೆಗೆ ಕಾಂಗ್ರೆಸ್ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್ ಗರ್ಹಿ ಈ ಘಟನೆಯ ವಿಡಿಯೊವನ್ನು ಸೋಷಿಯಲ್ ಮಿಡಿಯದಲ್ಲಿ ಹಂಚಿಕೊಂಡು, “ಈ ದೆಹಲಿ ಪೊಲೀಸ್ ನಮಾಜ್ ಮಾಡುವಾಗ ವ್ಯಕ್ತಿಯನ್ನು ಒದೆಯುತ್ತಾನೆ. ಬಹುಶಃ ಆತ ಮಾನವೀಯತೆಯ ಮೂಲ ತತ್ವಗಳನ್ನು ಅರ್ಥ ಮಾಡಿಕೊಂಡಿಲ್ಲ. ಈ ಪೊಲೀಸ್ ಅಧಿಕಾರಿಯ ಹೃದಯದಲ್ಲಿ ದ್ವೇಷವೇ ತುಂಬಿದೆ. ಈ ಅಧಿಕಾರಿಯ ವಿರುದ್ಧ ಸೂಕ್ತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೇವೆಯಿಂದ ವಜಾಗೊಳಿಸುವಂತೆ ದೆಹಲಿ ಪೊಲೀಸರನ್ನು ಕೋರಲಾಗಿದೆʼʼ ಎಂದು ಬರೆದುಕೊಂಡಿದ್ದಾರೆ.
ಪ್ರತಿಭಟನೆ, ಸೂಕ್ತ ಕ್ರಮದ ಭರವಸೆ
ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿ, ಪೊಲೀಸ್ ವಿರುದ್ಧ ಘೋಷಣೆ ಕೂಗಿದರು. ಬಳಿಕ ಡಿಸಿಪಿ ಮನೋಜ್ ಮೀನಾ ಕ್ರಮ ಕೈಗೊಂಡು, ವಿಡಿಯೊದಲ್ಲಿ ಕಾಣಿಸಿಕೊಂಡ ಪೊಲೀಸ್ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಅಗತ್ಯ ಶಿಸ್ತು ಕ್ರಮವನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಏನಿದು ಘಟನೆ?
ಶುಕ್ರವಾರದ ಪ್ರಾರ್ಥನೆಗಾಗಿ ಮಧ್ಯಾಹ್ನ ಇಂದ್ರಲೋಕ್‌ನ ಸ್ಥಳೀಯ ಮಸೀದಿಗೆ ಅನೇಕರು ಆಗಮಿಸಿದ್ದರು. ಮಸೀದಿಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಜಮಾಯಿಸಿದ್ದರು. ಹೀಗಾಗಿ ಮಸೀದಿ ಒಳಗೆ ಸ್ಥಳಾವಕಾಶದ ಕೊರತೆಯಿಂದಾಗಿ ಕೆಲವರು ಹತ್ತಿರದ ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಆರಂಭಿಸಿದ್ದರು. ರಸ್ತೆಯಲ್ಲಿ ಜನರು ಗುಂಪು ಗೂಡುವುದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಅವರನ್ನು ಚದುರಿಸಲು ಮುಂದೆ ಬಂದರು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಪ್ರಾರ್ಥನೆಗಾಗಿ ಮಂಡಿಯೂರಿ ಕುಳಿತಿದ್ದ ವ್ಯಕ್ತಿಗಳನ್ನು ಒದೆದಿದ್ದಾರೆ ಮತ್ತು ಹೊಡೆದಿದ್ದಾರೆ. ಜತೆಗೆ ಪ್ರಶ್ನಿಸಿದದವರನ್ನು ತಳ್ಳಿ, ಬೈದಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಮಾತ್ರವಲ್ಲ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅನೇಕರು ಪೊಲೀಸ್ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯನ್ನು ಹುಟ್ಟು ಹಾಕಿದೆ.