ಕರ್ನಾಟಕದಲ್ಲಿ ನಿಷೇಧವಾಗುತ್ತಾ ಆ್ಯಸಿಡ್​ ಮಾರಾಟ?​ ಗೃಹ ಸಚಿವ ಪರಮೇಶ್ವರ್ ಹೇಳಿದ್ದಿಷ್ಟು​

ರಾಜ್ಯ ಸರ್ಕಾರ ಆ್ಯಸಿಡ್​ ಮಾರಾಟವನ್ನು ನಿಷೇಧಿಸಲು ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್​ ಹೇಳಿದ್ದಾರೆ. ಮಾ.04 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಪ್ರಕರಣ ಸಂಬಂಧ ಆಕ್ರೋಶ ವ್ಯಕ್ತವಾದ ಕೆಲವೇ ದಿನಗಳಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ.

ಬೆಂಗಳೂರು, ಮಾರ್ಚ್​ 07: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆ್ಯಸಿಡ್​ ಮಾರಾಟವನ್ನು ನಿಷೇಧಿಸಲು ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwara)​ ಹೇಳಿದ್ದಾರೆ. ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಮಹಿಳೆಯರ ಮೇಲಿನ ದೌರ್ಜನ್ಯ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕೃತ ರಾಸಾಯನಿಕ ವಿತರಕರಿಗೆ ಮಾತ್ರ ಮಾರಾಟ ಮಾಡಲು ಅನುಮತಿ ಇರುವುದನ್ನು ಖಚಿತಪಡಿಸಿಕೊಳ್ಳಲಾಗುವುದು. ಪೊಲೀಸ್ ಮಹಾನಿರ್ದೇಶಕರು ಈ ಬಗ್ಗೆ ಶೀಘ್ರದಲ್ಲೇ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಪತ್ರ ಬರೆಯಲಿದ್ದಾರೆ ಎಂದು ಹೇಳಿದ್ದಾರೆ.

‘ಆ್ಯಸಿಡ್‌ನ ಉಚಿತ ಮಾರಾಟ ಅಥವಾ ಸುಲಭ ಲಭ್ಯತೆ ಇರಬಾರದು ಎಂದು ಡಿಜಿ ಸರ್ಕಾರ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ. ಆ ಮೂಲಕ ಆ್ಯಸಿಡ್​ನ್ನು ಎಲ್ಲಿಯೂ ಖರೀದಿಸಲು ಯಾರಿಗೂ ಲಭ್ಯವಾಗಬಾರದು. ರಾಸಾಯನಿಕ ವ್ಯವಹರಿಸುವವರಿಗೆ ಮಾತ್ರ ಅನುಮತಿ ನೀಡಬೇಕು’ ಎಂದಿದ್ದಾರೆ. ‘ಜೊತೆಗೆ ಪೊಲೀಸ್ ಇಲಾಖೆಯು ಕೂಡ ಆ್ಯಸಿಡ್​ ನಿಷೇಧಿಸುವ ವಿಚಾರವಾಗಿ ಪತ್ರ ಬರೆಯಲಿದೆ’ ಎಂದು ತಿಳಿಸಿದರು.

ಸೋಮವಾರ (ಮಾ.04) ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಪ್ರಕರಣ ಸಂಬಂಧ ಆಕ್ರೋಶ ವ್ಯಕ್ತವಾದ ಕೆಲವೇ ದಿನಗಳಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ಸರ್ಕಾರಿ ಪಿಯುಸಿ ಕಾಲೇಜ್‌ನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರು ಗಣಿತ ಪರೀಕ್ಷೆ ಬರೆಯಲು ಸಜ್ಜಾಗಿದ್ದರು. ಆದರೆ ಅದೇ ಹೊತ್ತಲ್ಲಿ ಮುಖಕ್ಕೆ ಮಾಸ್ಕ್‌, ತಲೆಗೆ ಕ್ಯಾಪ್‌ ಹಾಕಿಕೊಂಡು ಎಂಟ್ರಿಕೊಟ್ಟಿದ್ದ ಅಬೀನ್ ಎಂಬಾತ ಅದೊಬ್ಬಳು ವಿದ್ಯಾರ್ಥಿನಿಯ ಟಾರ್ಗೆಟ್‌ ಮಾಡಿ ಆ್ಯಸಿಡ್ ಎರಚಿದ್ದ. ಈ ವೇಳೆ ಪಕ್ಕದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರಿಗೂ ಆ್ಯಸಿಡ್ ಸಿಡಿದಿದ್ದು, ಮೂವರಿಗೆ ಗಾಯವಾಗಿದೆ. ಸದ್ಯ ಮೂವರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.