ಭಾರತ- ಅಫ್ಘಾನ್ ಪಂದ್ಯದ ವೇಳೆ ಫ್ಯಾನ್ಸ್​ಗಳ ನಡುವೆ ಬಡಿದಾಟ! ವಿಡಿಯೋ ವೈರಲ್

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ವಿಶ್ವಕಪ್  ಕದನದಲ್ಲಿ ನಿರೀಕ್ಷಿತ ಫಲಿತಾಂಶ ಹೊರಬಿದ್ದಿದೆ. ಅಫ್ಘಾನಿಸ್ತಾನ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದ ಟೀಂ ಇಂಡಿಯಾ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಅಫ್ಘಾನಿಸ್ತಾನ ನೀಡಿದ 273 ರನ್​ಗಳ ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಶತಕ ಸಿಡಿಸಿದರೆ, ಉಪನಾಯಕ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ ಸಿಡಿಸಿ ಮಿಂಚಿದರು. ಈ ಇಬ್ಬರ ಅಮೋಘ ಪ್ರದರ್ಶನದಿಂದಾಗಿ ಭಾರತ ಇನ್ನೂ 15 ಓವರ್​ಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಆದರೆ ಇದೇ ಪಂದ್ಯದಲ್ಲಿ ನಡೆದ ಅಭಿಮಾನಿಗಳ ನಡುವಿನ ಮುಷ್ಠಿ ಯುದ್ಧದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲವರು ಇದು ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಮಾನಿಗಳ ನಡುವಿನ ಕದನ ಎಂದು ಬಿಂಬಿಸುವ ಮೂಲಕ ಈ ಜಗಳವನ್ನು ಮತ್ತಷ್ಟು ಸುದ್ದಿಯಾಗಿಸಿದ್ದಾರೆ.

ಕೊಹ್ಲಿ- ನವೀನ್ ಜಗಳ ಸುಖಾಂತ್ಯ

ವಾಸ್ತವವಾಗಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಕದನದಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಹೇಗೆ ಮುಖಾಮುಖಿಯಾಗುತ್ತಾರೆ ಎಂದು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ, ಪಂದ್ಯದ ವೇಳೆ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು, ಹಸ್ತಲಾಘವ ಮಾಡಿ ಎಲ್ಲಾ ವಿವಾದಗಳಿಗೆ ತೆರೆ ಎಳೆದರು. ಇದರ ಜೊತೆಗೆ ಪಂದ್ಯದ ನಂತರ ಮಾತನಾಡಿದ ನವೀನ್, ವಿರಾಟ್‌ರನ್ನು ಹಾಡಿ ಹೊಗಳಿದರೆ, ಕೊಹ್ಲಿ ಕೂಡ ನವೀನ್​ರನ್ನು ಟಾರ್ಗೆಟ್ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದರು. ಹೀಗಾಗಿ ಈ ಇಬ್ಬರ ನಡುವಿನ ಸೋಶಿಯಲ್ ಮೀಡಿಯಾ ವಾರ್ ಸುಖಾಂತ್ಯ ಕಂಡಿತು. ಆದರೆ ಇದೇ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕುಳಿತಿದ್ದ ಪ್ರೇಕ್ಷಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಪ್ರಕಾರ ಗಂಭೀರ್ ಮತ್ತು ಕೊಹ್ಲಿ ಅಭಿಮಾನಿಗಳ ನಡುವೆ ಈ ಹೊಡೆದಾಟ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ರೀತಿಯ ಘಟನೆ ಸಹಜ

ಅದೇನೇ ಇರಲಿ, ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇಂತಹ ಕಾಳಗಕ್ಕೆ ಇತಿಹಾಸವೇ ಇದೆ. ಇಲ್ಲಿ ಪಂದ್ಯ ನಡೆದಾಗಲೆಲ್ಲಾ ಇಂತಹ ಘಟನೆಗಳು ನಡೆಯುವುದು ಸಹಜ. ನವೀನ್ ಉಲ್ ಹಕ್ ಮತ್ತು ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಜಗಳವಾಡಿದಾಗ ಕೊಹ್ಲಿ, ಗೌತಮ್ ಗಂಭೀರ್ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದರು. ಆ ಬಳಿಕ ಕೊಹ್ಲಿ ಅಭಿಮಾನಿಗಳು ಅವಕಾಶ ಸಿಕ್ಕಾಗಲೆಲ್ಲ ಗಂಭೀರ್‌ರ ಕಾಲೆಳೆಯುವುದು ಹಲವು ಬಾರಿ ಕಂಡು ಬಂದಿದೆ. ಇಂದೂ ಕೂಡ ನವೀನ್ ಉಲ್ ಹಕ್ ಬ್ಯಾಟಿಂಗ್​ಗೆ ಬಂದಾಗ ಇಡೀ ಕ್ರೀಡಾಂಗಣ ಕೊಹ್ಲಿ ಕೊಹ್ಲಿ ಎಂದು ಜೈಕಾರ ಕೂಗುತ್ತಿತ್ತು.

ಕೊಹ್ಲಿ-ಗಂಭೀರ್ ಅಭಿಮಾನಿಗಳ ಘರ್ಷಣೆ!

ವೈರಲ್ ಆಗಿರುವ ವಿಡಿಯೋ ಪ್ರಕಾರ ಕೊಹ್ಲಿ ಮತ್ತು ಗಂಭೀರ್ ಅಭಿಮಾನಿಗಳ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳು ಪರಸ್ಪರ ನಿಂದಿಸಿದ್ದು, ಅವರ ನಡುವೆ ಮಾತಿನ ಚಕಮಕಿಯೂ ನಡೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಆದರೆ, ಯಾವ ಕಾರಣದಿಂದ ಜಗಳ ಆರಂಭವಾಯಿತು ಎಂಬುದು ವಿಡಿಯೋದಿಂದ ಸ್ಪಷ್ಟವಾಗಿಲ್ಲ.

ಆದರೆ ಇನ್ನು ಕೆಲವರ ಪ್ರಕಾರ ಇದು ಕೊಹ್ಲಿ- ಹಾಗೂ ಗಂಭೀರ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳವಲ್ಲ ಎಂದು ಹೇಳುತ್ತಿದ್ದಾರೆ. ಗಂಭೀರ್ ಹಾಗೂ ಕೊಹ್ಲಿ ನಡುವೆ ಇನ್ನಷ್ಟು ಕಂದಕವನ್ನು ಉಂಟು ಮಾಡುವ ಸಲುವಾಗಿ ಈ ರೀತಿಯ ಅಸ್ತ್ರ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.