ಐಪಿಎಲ್​ನಲ್ಲಿ ಅಬ್ಬರಿಸಲು ಧೋನಿ ರೆಡಿ; ಅಭ್ಯಾಸದ ವೇಳೆ ಸಿಕ್ಸರ್​ಗಳ ಸುರಿಮಳೆ

ವಿಂಟೇಜ್ ಶೈಲಿಯ ಉದ್ದನೆಯ ಕೂದಲಿನೊಂದಿಗೆ ಧೋನಿ ಬ್ಯಾಟಿಂಗ್​ ನಡೆಸುತ್ತಿರುವ ಫೋಟೊ ವೈರಲ್​ ಆಗಿದೆ.

ಚೆನ್ನೈ ಮಾರ್ಚ್‌ 10 : ವಿದಾಯದ ಐಪಿಎಲ್(IPL 2024)​ ಟೂರ್ನಿ ಆಡುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್(chennai super kings)​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿಯ(MS Dhoni) ಆಟವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಧೋನಿ ಅವರು ನೆಟ್ಸ್​ನಲ್ಲಿ(training session for CSK) ಭರ್ಜರಿ ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ವಿಂಟೇಜ್ ಶೈಲಿಯ ಉದ್ದನೆಯ ಕೂದಲಿನೊಂದಿಗೆ ಧೋನಿ ಬ್ಯಾಟಿಂಗ್​ ನಡೆಸುತ್ತಿರುವ ಫೋಟೊ ವೈರಲ್​ ಆಗಿದೆ.

ಧೋನಿ ಅವರು 2 ದಿನಗಳ ಹಿಂದಷ್ಟೇ ಚೆನ್ನೈ ತಂಡದ ನೂತನ ಜೆರ್ಸಿಯಲ್ಲಿ 2 ಬ್ಯಾಟ್​ ಹಿಡಿದು ಮೈದಾನಕ್ಕೆ ನಡೆದು ಬರುತ್ತಿರುವ ವಿಡಿಯೊ ವೈರಲ್​ ಆಗಿತ್ತು. ಇದೀಗ ಬ್ಯಾಟಿಂಗ್​ ನಡೆಸುವ ಫೋಟೊ ವೈರಲ್​ ಆಗಿದೆ. ಧೋನಿ ಅವರು ಕೇವಲ ದೊಡ್ಡ ಹೊಡೆತಗಳನ್ನು ಮಾತ್ರ ಅಭ್ಯಾಸ ನಡೆಸಿದ್ದಾರೆ. ಈ ಬಾರಿ 7ನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್​ ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ. ಇದೇ ಕಾರಣಕ್ಕೆ ಅವರು ದೊಡ್ಡ ಹೊಡೆತಗಳನ್ನು ಅಭ್ಯಾಸ ಮಾಡಿದಂತಿದೆ.

ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ(IPL 2024) ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. 2 ದಿನಗಳ ಹಿಂದಷ್ಟೇ ಧೋನಿ ತಮ್ಮ ಫೇಸ್​ಬುಕ್​ನಲ್ಲಿ ‘ಹೊಸ ಸೀಸನ್‌ಗಾಗಿ ಕಾತುರದಿಂದ ಕಾಯುತ್ತಿದ್ದೇನೆ. ಈ ಆವೃತ್ತಿಯಲ್ಲಿ ನಾನು ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್​ ಗಮನಿಸುವಾಗ ಅವರು ಈ ಬಾರಿ ವಿದಾಯ ಹೇಳುವುದು ಬಹುತೇಕ ಖಚಿವಾಗಿದ್ದು 18ನೇ ಆವೃತ್ತಿಯಲ್ಲಿ ಚೆನ್ನೈ ತಂಡದ ಕೋಚ್​ ಅಥವಾ ಮೆಂಟರ್​ ಆಗಿ ಕಾರ್ಯನಿರ್ವಹಿಸಲು ಧೋನಿ ಯೋಜನೆಯೊಂದನ್ನು ಹಾಕಿಕೊಂಡಂತಿದೆ.

ಮಾರ್ಚ್​ 22ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಚೆನ್ನೈ ತಂಡ ತನ್ನ ಬದ್ಧ ಎದುರಾಳಿ ಆರ್​ಸಿಬಿ ವಿರುದ್ಧ ಪಂದ್ಯವನ್ನಾಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಬಾರಿಯ ಆವೃತ್ತಿಗಾಗಿ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದ್ದರೂ ಕಪ್​ ಗೆದ್ದು ಇತಿಹಾಸ ನಿರ್ಮಿಸಿತ್ತು.

ಚೆನ್ನೈ ತಂಡ
ಎಂ.ಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶೇಕ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯೀನ್ ಅಲಿ, ಶಿವಂ ದುಬೆ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜವರ್ಧನ್ ಹಂಗರ್ಗೇಕರ್, ದೀಪಕ್ ಚಹರ್, ಮಹೇಶ್ ದೀಕ್ಷಾನಾ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾನಾ, ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ.