ಕಾರವಾರ: ಭಾರತೀಯ ನೌಕಾಪಡೆಯ ಯುದ್ಧ ಹಡಗು ಐ.ಎನ್.ಎಸ್. ವಿಕ್ರಮಾದಿತ್ಯದ ಪ್ರಧಾನ ಕಚೇರಿ ವತಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೋಮವಾರ ಕಾರವಾರದ ಆಶಾನಿಕೇತನ ಕಿವುಡು ಮತ್ತು ಮೂಕ ಮಕ್ಕಳ ವಸತಿ ಶಾಲೆಗೆ ಭೇಟಿ ನೀಡಿ ಅಗತ್ಯ ಸಲಕರಣೆಗಳನ್ನು ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ತಾಲೂಕಿನ ಐ.ಎನ್.ಎಸ್. ಕದಂಬ ನೌಕಾನೆಲೆಯಲ್ಲಿರುವ ಐ.ಎನ್.ಎಸ್. ವಿಕ್ರಮಾದಿತ್ಯದ ಪ್ರಧಾನ ಕಚೇರಿ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕಮ್ಯೂನಿಟಿ ಔಟ್ ರೀಚ್ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿನ ಮಕ್ಕಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ವಿಕ್ರಮಾದಿತ್ಯ ತಂಡವನ್ನು ದೇಶಭಕ್ತಿಯ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸ್ವಾಗತಿಸಿದರು. ಜೊತೆಗೆ ಮಕ್ಕಳಿಂದ ಸ್ತಬ್ಧಚಿತ್ರ ಕಾರ್ಯಕ್ರಮ ನಡೆಯಿತು. ಬಳಿಕ ನೌಕಾಪಡೆಯ ಅಧಿಕಾರಿ-ಸಿಬ್ಬಂದಿಗಳ ತಂಡವು ಸದ್ಭಾವನೆಯ ಸೂಚಕವಾಗಿ ಮಕ್ಕಳಿಗೆ ಅಗತ್ಯವಾದ ದಿನಬಳಕೆ ಹಾಗೂ ಇತರ ಅವಶ್ಯಕ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಿದರು.