ಕಾರವಾರ ಮಾರ್ಚ್ 10 : ಖಾಯಿಲೆ ಬಂದ ಮೇಲೆ ಚಿಕಿತ್ಸೆ ನೀಡುವವರು ವೈದ್ಯರಾದರೆ.. ಖಾಯಿಲೆಯೇ ಬರದಂತೆ ಕಾಪಾಡುವವರು ಪೌರಕಾರ್ಮಿಕರು ಎಂದು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರವಾರದಲ್ಲಿ ಹೇಳಿದರು..
ಜಿಲ್ಲಾ ಕೇಂದ್ರ ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ನಡೆದ ಸ್ವಚ್ಛತಾ ಕಾರ್ಮಿಕರ ಅರಿವು ಸಮಾಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು 127 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ್ರು. ಈ ಸಂಧರ್ಭದಲ್ಲಿ ಶಿರಸಿ ಸಿದ್ದಾಪುರ ಶಾಸಕರಾದ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮೊದಲಾದವರು ಉಪಸ್ಥಿತರಿದ್ದರು..
ಬಳಿಕ ಮಾತನಾಡಿದ ಸಚಿವರು ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಬಾರದು. ಸ್ವಚ್ಛತೆಯ ಉದ್ದೇಶಕ್ಕಾಗಿ ದುಡಿಯುತ್ತಿರುವ ಪೌರ ಕಾರ್ಮಿಕರ ಬಗ್ಗೆ ನಮ್ಮ ಸರ್ಕಾರ ಸಾಕಷ್ಟು ಕಾಳಜಿ ಹೊಂದಿದ್ದು, ಅವರ ಬದುಕನ್ನು ಎತ್ತರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಪೌರಾಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಅವರ ಭವಿಷ್ಯಕ್ಕೆ ಬುನಾದಿ ಹಾಕಿಕೊಡಬೇಕು. ಪೌರ ಕಾರ್ಮಿಕರ ಮಕ್ಕಳು ಮತ್ತೆ ಪೌರ ಕಾರ್ಮಿಕರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರ ಮೇಲಿದೆ. ರಾಜ್ಯದ ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಮನೆ ಕೊಡುವ ನಿರ್ಧಾರ ನಮ್ಮ ಸರ್ಕಾರ ಮಾಡಿದೆ. ಉಳಿದ ಪೌರಕಾರ್ಮಿಕರನ್ನೂ ಖಾಯಂ ಮಾಡುವ ನಿಟ್ಟಿನಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ರು…