Cotton Candy Ban : ರಾಜ್ಯದಲ್ಲಿ ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ. ಗೋಬಿ ಮಂಚೂರಿಗೂ ಇದೇ ರೀತಿಯ ಪರಿಸ್ಥಿತಿ ಎದುರಾಗುವ ನಿರೀಕ್ಷೆ ಇದೆ.
ಬೆಂಗಳೂರು ಮಾರ್ಚ್ 11 : ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಮಕ್ಕಳು ಅತ್ಯಂತ ಹೆಚ್ಚು ಇಷ್ಟಪಟ್ಟು ತಿನ್ನುವ, ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುವ ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ (Cotton Candy Ban). ಇದೇ ವೇಳೆ ಕೃತಕ ಬಣ್ಣಗಳನ್ನು ಬಳಸುವ ಮೂಲಕ ತಯಾರಿಸಲಾಗುವ ಗೋಬಿ ಮಂಚೂರಿಗೂ (Gobi manchurian) ಆಪತ್ತು ಎದುರಾಗಿದೆ. ಇನ್ನು ಮುಂದೆ ಗೋಬಿ ಮಂಚೂರಿ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ. ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ (Health minister Dinesh Gundu Rao) ಅವರು ಈ ವಿಷಯವನು ತಿಳಿಸಿದ್ದು, ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗುತ್ತದೆ ಎಂದು ಪ್ರಕಟಿಸಿದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದ ಎಂದು ವಿವರಿಸಿದರು.
ರಾಜ್ಯಾದ್ಯಂತ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ದಿನೇಶ್ ಗುಂಡೂರಾವ್ ಹೇಳಿದರು.
ತಮಿಳುನಾಡಿನಲ್ಲಿ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ನಿಷೇಧಿಸಿದ ಬೆನ್ನಿಗೇ ರಾಜ್ಯದಲ್ಲೂ ಈ ಎರಡು ಆಹಾರ ವಸ್ತುಗಳ ಮೇಲೆ ನಿಗಾ ಇಡುವಂತೆ ಮನವಿ ಮಾಡಲಾಗಿತ್ತು, ಸಾರ್ವಜನಿಕರ ಒತ್ತಡದ ಮೇರೆಗೆ ರಾಜ್ಯ ಸರಕಾರದ ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ, ವಿಭಾಗವು, ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂ ಮಾದರಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿತ್ತು.
ಈ ಬಗ್ಗ ವಿವರ ನೀಡಿದ ಸಚಿವ ದಿನೇಶ್ ಗುಂಡೂ ರಾವ್ ಅವರು, ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. 171 ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ 107 ಮಾದರಿಗಳಲ್ಲಿ ಕೃತಕ ಬಣ್ಣಗಳ ಅಸುರಕ್ಷಿತ ಮಾದರಿ ಕಂಡುಬಂದವು. ಶುಗರ್ ಕ್ಯಾಂಡಿಯ ಮಾದರಿಗಳನ್ನೂ ಸಂಗ್ರಹಿಸಿದ್ದೇವೆ.
ಗೋಬಿ ಮಂಚೂರಿಯಲ್ಲಿ ಪತ್ತೆಯಾದ ಕೆಮಿಕಲ್
ರಾಜ್ಯದಲ್ಲಿ 171 ಗೋಬಿ ಮಂಚೂರಿಯನ್ ಸ್ಯಾಂಪಲ್ ಸಂಗ್ರಹಿಸಿದ್ದು, ಅದರಲ್ಲಿ 107 ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಪತ್ತೆಯಾದವು. ಟಾರ್‌ಟ್ರಾಸೈನ್ (Tartrazine), ಸನ್ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಎಂಬ ರಾಸಾಯನಿಕಗಳು ಇದರಲ್ಲಿ ಕಂಡುಬಂದಿವೆ ಎಂದು ಸಚಿವರು ವಿವರಿಸಿದರು.
Cotton Candy Ban : ಕಾಟನ್ ಕ್ಯಾಂಡಿ ಸ್ಯಾಂಪಲ್ ವರದಿ ಏನು?
ಕಾಟನ್ ಕ್ಯಾಂಡಿಗೆ ಸಂಬಂಧಿಸಿ 25 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ 15ರಲ್ಲಿ ಕೃತಕ ಬಣ್ಣಗಳನ್ನು ಬಳಸಿರುವುದು ಪತ್ತೆಯಾಗಿದೆ. ಇದರಲ್ಲಿ ಕೂಡಾ ಟಾರ್‌ಟ್ರಾಸೈನ್ (Tartrazine), ಸನ್ಸೆಟ್ ಯೆಲ್ಲೋ ಮತ್ತು ವಿಶೇಷವಾಗಿ ರೋಡಮೈನ್ ಬಿ (Rhodamine B) ಬಳಸಲಾಗಿದೆ.
ಈ ಎಲ್ಲ ರಾಸಾಯನಿಕಗಳು ಆರೋಗ್ಯಕ್ಕೆ ಸುರಕ್ಷಿತವಲ್ಲ. ಅದರಲ್ಲೂ ರೋಡಮೈನ್ ಬಿಯಂತೂ ಕ್ಯಾನ್ಸರ್ ಗೆ ಮೂಲ ಕಾರಣ. ಇದೊಂದು ಬಣ್ಣಕಾರಕವಾಗಿದ್ದು, ಇದನ್ನು ಬಳಸಬಾರದು ಎಂದು ಮೊದಲೇ ನಿಷೇಧ ವಿಧಿಸಲಾಗಿದೆ. ಹಾಗಿದ್ದರೂ ಅವುಗಳನ್ನು ಬಳಸಿರುವುದು ಪತ್ತೆಯಾಗಿದೆ. ರೋಡಮೈನನ್ನು ಕಾಟನ್ ಕ್ಯಾಂಡಿಗೆ ಪಿಂಕ್ ಬಣ್ಣ ತರಲು ಬಳಸುತ್ತಾರೆ ಎಂದು ಸಚಿವರು ವಿವರಿಸಿದರು.
ಗೋಬಿ ಮಂಚೂರಿಗೆ ನಿಷೇಧ ಇಲ್ಲ, ಬಣ್ಣ ಬಳಸುವಂತಿಲ್ಲ
ಗೋಬಿ ಮಂಚೂರಿಯಲ್ಲಿ ಟಾರ್ಟ್ರಾಸೈನ್ ಎಂಬ ಕೃತಕ ಬಣ್ಣಕಾರಕವನ್ನು ಬಳಸಲಾಗುತ್ತದೆ. ಹೀಗೆ ಬಣ್ಣ ಬಳಸಿದ ಗೋಬಿ ಮಂಚೂರಿಯನ್ನು ತಯಾರಿಸಬಾರದು. ಬಣ್ಣಕಾರಕಗಳನ್ನು ಬಳಸದ ಕ್ಯಾಂಡಿ ಮತ್ತು ಗೋಬಿ ಮಂಚೂರಿಗೆ ಅವಕಾಶವಿದೆ ಎಂದು ಅವರು ತಿಳಿಸಿದರು.
ಕಬಾಬ್ ಮೇಲೂ ಬಿತ್ತು ಆಹಾರ ಇಲಾಖೆ ಕಣ್ಣು
ಈ ನಡುವೆ ಚಿಕನ್ ಕಬಾಬ್‌ನಲ್ಲೂ ಕೆಲವರು ಬಣ್ಣಕಾರಕಗಳನ್ನು ಬಳಸುತ್ತಾರೆ. ಇದು ಕೂಡಾ ಅಪಾಯಕಾರಿ. ಆಹಾರ ಇಲಾಖೆಯ ಕಣ್ಣು ಇದರ ಮೇಲೂ ಬಿದ್ದಿದೆ. ಕಬಾಬ್ ಮಾದರಿಗಳನ್ನು ಆಗಲೇ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.