ಶಿರಸಿ: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರ ವ್ಯಾಪ್ತಿಯ 13 ಸಾವಿರ ಮನೆಗಳಿಗೆ ನಗರಸಭೆ ಉಚಿತವಾಗಿ ಧ್ವಜ ನೀಡಲು ನಿರ್ಧರಿಸಿದೆ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಎಲ್ಲ ಕಚೇರಿ, ವಾಣಿಜ್ಯ ಮಳಿಗೆ,ಅಂಗಡಿ, ಮನೆಗಳಲ್ಲಿ ಧ್ವಜ ಹಾರಿಸಬೇಕು. ಆ.13 ರಿಂದ 15 ರ ಸಂಜೆಯ ವರೆಗೆ ರಾಷ್ಟ್ರಧ್ವಜ ಹಾರಾಡಬೇಕಿದೆ ಎಂದರು.
ವಾಣಿಜ್ಯ ಮಳಿಗೆಗಳಲ್ಲಿ ಹಾರಿಸುವ ದೊಡ್ಡ ಆಕಾರದ ಧ್ವಜವನ್ನು ರೂ. 22 ರಂತೆ ಸಾರ್ವಜನಿಕರು ಖರೀದಿಸಬಹುದಾಗಿದ್ದು, ಇದಕ್ಕಾಗಿ ನಾಲ್ಕು ಸಾವಿರ ಧ್ವಜಗಳನ್ನು ನಗರಸಭೆ ಪೂರೈಸಲು ನಿರ್ಧರಿಸಿದೆ. ಆ. 15 ರ ಬಳಿಕ ಧ್ವಜಕ್ಕೆ ಯಾವುದೇ ಅಪಮಾನ ಆಗದಂತೆ ನೋಡಿಕೊಂಡು, ಈ ಧ್ವಜವನ್ನು ಮನೆಗಳಲ್ಲಿಯೇ ಜೋಪಾನ ಮಾಡಿಟ್ಟುಕೊಳ್ಳಬೇಕು. ಇಟ್ಟುಕೊಳ್ಳಲು ಸಾಧ್ಯವಾಗದವರು ನಗರಸಭೆಗೆ ವಾಪಸ್ ಮಾಡಿದರೆ ನಾವು ಜೋಪಾನವಾಗಿ ಇಡುತ್ತೇವೆ ಎಂದರು.
ಅಮೃತ ಮಹೋತ್ಸವದ ಅಂಗವಾಗಿ ಆ.8 ರಿಂದ 11 ರ ವರೆಗೆ ನಗರಸಭೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ.9 ರಂದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರಿಗೆ ನಾಗರೀಕ ಸನ್ಮಾನ ಆಯೋಜಿಸಲಾಗಿದೆ. ಆ.10 ರಂದು ಅಮರ ಜವಾನ ಉದ್ಯಾನವನದಲ್ಲಿ ದೇಶಭಕ್ತಿ ಸಂಗೀತ ಕಾರ್ಯಕ್ರಮ, ಹಿರಿಯ 5 ಸೈನಿಕರಿಗೆ ಸನ್ಮಾನ ಆಯೋಜಿಸಲಾಗಿದೆ ಎಂದರು. ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ಕೇಶವ ಚೌಗುಲೆ, ಸದಸ್ಯರು, ಅಧಿಕಾರಿಗಳು ಇದ್ದರು.