ದೇಸಿ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡದ್ದು ಅದೇ ರಾಗ ಅದೇ ಹಾಡು

ಇತ್ತೀಚಿನ ಕೆಲವು ವರ್ಷಗಳ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಪ್ರದರ್ಶನ, ಅಂಕಿ ಅಂಶ ಹಾಗೂ ಫಲಿತಾಂಶಗಳನ್ನು ಅವಲೋಕಿಸಿದಾಗ ಇವರ ಪರಿಸ್ಥಿತಿ “ಅದೇ ರಾಗ ಅದೇ ಹಾಡು” ಎನ್ನುವ ರೀತಿಯದ್ದು ಎಂಬುದು ಮನದಟ್ಟಾಗುತ್ತದೆ. ಎಡವುದು ಮಾನವ ಸಹಜ ಗುಣ. ಆದರೆ ಒಮ್ಮೆ ಎಡವಿದ ನಂತರ ತಮ್ಮ ಎಡವಿಗೆ ಕಾರಣ ತಿಳಿದುಕೊಂಡು, ತಿದ್ದಿ ಕೊಳ್ಳಬೇಕಾದುದು ಬುದ್ದಿವಂತರ ಹಾಗೂ ಪ್ರಗತಿಪರರ ಲಕ್ಷಣ. ಅದಿಲ್ಲದೆ ಹೋದರೆ ತಪ್ಪು ಪುನರಾವರ್ತನೆ ಆಗುತ್ತ ಹೋಗುತ್ತದೆ ಹಾಗೂ ವ್ಯಕ್ತಿ ನಿಂತ ನೀರಿನಂತಾಗಿ ಬಿಡುತ್ತಾನೆ.

ನಮ್ಮ ದೇಶದಲ್ಲಿ ಬಿಸಿಸಿಐ ಪ್ರಮುಖವಾಗಿ ಮೂರು ಪ್ರಕಾರದ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸುತ್ತಾ ಬಂದಿದೆ. ಟಿ-20 ಮಾದರಿಯಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ, ಏಕದಿನದ ಪಂದ್ಯದ ಮಾದರಿಯಲ್ಲಿ ವಿಜಯ್ ಹಜಾರೆ ಟೂರ್ನಿ ಹಾಗೂ ಟೆಸ್ಟ್ ಪಂದ್ಯದ ಮಾದರಿಯಲ್ಲಿ ರಣಜಿ ಟ್ರೋಫಿ ಪಂದ್ಯಾವಳಿ. ಈ ಎಲ್ಲಾ ಪಂದ್ಯಾವಳಿಯಲ್ಲಿ ನಮ್ಮ ದೇಶದ ಒಟ್ಟೂ ಸರಿ ಸುಮಾರು 40 ತಂಡಗಳು ಪಾಲ್ಗೊಳ್ಳುತ್ತವೆ. ಈ ಎಲ್ಲಾ ಪಂದ್ಯಾವಳಿಗಳು ಪ್ರಾರಂಭಿಕ ಹಂತದಲ್ಲಿ ಲೀಗ್ ಮಾದರಿಯಲ್ಲಿ ಸಾಗಿಬಂದು ನಂತರ ನಾಕೌಟ್ ಮಾದರಿಯಲ್ಲಿ ನಡೆಯುವುದು ಪದ್ದತಿ. ನಮ್ಮ ಕರ್ನಾಟಕ ಕ್ರಿಕೆಟ್ ತಂಡದ ವ್ಯಥೆಯ ಕಥೆ ಅಡಗಿರುವುದೇ ಇಲ್ಲಿ.

ಆರಂಭಿಕ ಹಂತದಲ್ಲಿ ವೀರಾವೇಶದ ಹೋರಾಟ ನಡೆಸಿ, ಅಗ್ರ ಕ್ರಮಾಂಕದಲ್ಲಿ ಲೀಗ್ ವ್ಯವಹಾರ ಮುಗಿಸುವ ರಾಜ್ಯ ಕ್ರಿಕೆಟ್ ತಂಡ ಮುಂದಿನ ನಾಕೌಟ್ ಹಂತದಲ್ಲಿ ಮಾತ್ರ ಸಂಪೂರ್ಣ ಮುಗ್ಗರಿಸಿ ಬಿಡುತ್ತದೆ. ಲೀಗ್ ಹಂತದಲ್ಲಿ ತೋರ್ಪಡಿಸಿದ ಶೌರ್ಯ, ಸಾಹಸ, ಕೆಚ್ಚು ಯಾವುದನ್ನೂ ಉಳಿಸಿಕೊಳ್ಳದೇ ತೀರಾ ಪೇಲವ ಪ್ರದರ್ಶನ ನೀಡಿ ಪಂದ್ಯಾವಳಿಯಿಂದ ನಿರ್ಗಮಿಸುತ್ತದೆ. ಇದು ಒಂದೆರಡು ವರ್ಷಗಳ ಕಥೆಯಲ್ಲ. ಈ ವರ್ಷ ಕೂಡಾ ನಮ್ಮ ತಂಡ ಟಿ-ಟ್ವೆಂಟಿ ಮಾದರಿಯಲ್ಲಿ ಲೀಗ್ ಹಂತದಲ್ಲಿಯೇ ನಿರ್ಗಮಿಸಿತು. ನಂತರ ಏಕದಿನ ಮಾದರಿಯಲ್ಲಿ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಉಪಾಂತ್ಯ ಪಂದ್ಯದವರೆಗೆ ಸಾಗಿಬಂತು. ಅಲ್ಲಿ ರಾಜಸ್ತಾನ ತಂಡಕ್ಕೆ ಶರಣಾಗಿ ಹೋರಾಟಕ್ಕೆ ಮಂಗಳ ಹಾಡಿತು.

ಇದಾದ ನಂತರ ನಡೆದ ನಾಡಿನ ಪ್ರತಿಷ್ಠಿತ ಟೆಸ್ಟ್ ಮಾದರಿಯ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಶುಭಾರಂಭಗೈದು ಲೀಗ್ ವ್ಯವಹಾರದಲ್ಲಿ ಅಗ್ರ ತಂಡ ಎಂಬ ಗೌರವದ ಸಾಧನೆಯೊಂದಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆಯಿತು. ಇದಾದ ನಂತರ ಮತ್ತೆ ಅದೇ ಹಳೆಯ ಚಾಳಿಯ ಪುನರಾವರ್ತನೆ ಎಂಬಂತೆ ವಿದರ್ಭ ತಂಡಕ್ಕೆ ಶರಣಾಗಿ ಟ್ರೋಫಿ ಗೆಲ್ಲುವ ಮಹತ್ವಾಕಾಂಕ್ಷೆಗೆ ತಿಲಾಂಜಲಿ ನೀಡಿತು.

ಅಂದಮಾತ್ರಕ್ಕೆ ನಮ್ಮ ರಾಜ್ಯ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರ ಕೊರತೆ ಎನೂ ಇಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದ ಆಟಗಾರರು ಇದ್ದಾರೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಗೊಳ್ಳವ ನಿಟ್ಟಿನಲ್ಲಿ ಕದ ತಟ್ಟುತ್ತಿರುವ ಯುವ ಪ್ರತಿಭಾವಂತರು ಇದ್ದಾರೆ. ಆದರೆ ಸಮಸ್ಯೆ ತಲೆದೋರಿರುವುದು ಈ ಎಲ್ಲಾ ಆಟಗಾರರಿಂದ ಸಾಂಘಿಕ ಹೋರಾಟ ಕಂಡುಬರದೇ ಇರುವುದು. ಈ ಸಲದ ಕ್ರಿಕೆಟ್ ಸೀಸನ್ ಆರಂಭಗೊಳ್ಳುತ್ತಿದ್ದಂತೆ ರಾಜ್ಯ ಕ್ರಿಕೆಟ್ ಮಂಡಳಿ ತಂಡಕ್ಕೆ ಭರ್ಜರಿ ಶಸ್ತ್ರ ಚಿಕಿತ್ಸೆ ನಡೆಸಿತ್ತು. ಆಟದಲ್ಲಿ ಮೊನಚು ಕಳೆದುಕೊಂಡಿರುವ ಹಲವು ಆಟಗಾರರನ್ನು ಕೈಬಿಟ್ಟು ಭವಿಷ್ಯದ ದೃಷ್ಟಿಯಿಂದ ಕೆಲ ಯುವ ಪ್ರತಿಭಾನ್ವಿತರಿಗೆ ಮಣೆ ಹಾಕಿತ್ತು. ತಂಡದಿಂದ ಗೇಟ್‌ಪಾಸ್ ಪಡೆದು ಹೊರನಡೆದ ಕೆಲವು ಆಟಗಾರರು ಪ್ರಸ್ತುತ ಬೇರೆ ಬೇರೆ ರಾಜ್ಯಗಳ ತಂಡದಲ್ಲಿ ಸ್ಥಾನ ಪಡೆದುಕೊಂಡು ತಮ್ಮ ಕ್ರೀಡಾ ಬದುಕನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ‌ಅಂತವರಲ್ಲೊಬ್ಬರು ಕರುಣ್ ನಾಯರ್ ಇಂದು ವಿದರ್ಭ ತಂಡದಿಂದ ಮೈದಾನಕ್ಕಿಳಿದು ಅತ್ಯಮೂಲ್ಯ ಹಾಗೂ ನಿರ್ಣಾಯಕ 90 ಓಟಗಳನ್ನು ಭಾರಿಸಿ ಕರ್ನಾಟಕ ತಂಡಕ್ಕೆ ಕಂಟಕಪ್ರಾಯರಾದರು.

ಸೀಸನ್ ಉದ್ದಕ್ಕೂ ಭರ್ಜರಿ ಪಾರ್ಮ್ ನಲ್ಲಿದ್ದ ದೇವದತ್ತ ಫಡೀಕಲ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದುದರಿಂದ ಅವರ ಸೇವೆಯಿಂದ ರಾಜ್ಯ ತಂಡ ವಂಚಿತವಾಗಬೇಕಾಗಿ ಬಂತು. ನಾಯಕ ಮಯಾಂಕ ಅಗರ್ವಾಲ್ ಹಾಗೂ ಹಿರಿಯ ಅನುಭವಿ ಆಟಗಾರರಾದ ಮನೀಷ ಪಾಂಡೆ ಆಗೊಮ್ಮೆ ಈಗೊಮ್ಮೆ ಮಿಂಚಿದ್ದು ಬಿಟ್ಟರೆ, ಉಳಿದಂತೆ ತೀರಾ ಸಪ್ಪೆ ಎನಿಸಿಬಿಟ್ಟರು. ಸಮರ್ಥ ತಮ್ಮ ಸಾಮರ್ಥ್ಯವನ್ನೇ ಕಳಕೊಂಡಿದ್ದಾರೆ. ಪ್ರಸಿದ್ದ ಕೃಷ್ಣ ಅವರ ಸೇವೆ ತಂಡಕ್ಕೆ ಸರಿಯಾಗಿ ದೊರಕಲೇ ಇಲ್ಲ. ಉಳಿದಂತೆ ಯುವ ವೇಗವಾಹಿನಿಗಳಾದ ವಿದ್ವತ್ ಕಾವೇರಪ್ಪ, ವೈಷಾಕ್ ವಿಜಯಕುಮಾರ್ ಹಾಗೂ ವಾಸುಕಿ ಅವರ ಶ್ರೇಷ್ಠ ಪ್ರದರ್ಶನ ಸೀಸನ್ ಉದ್ದಕ್ಕೂ ಕಂಡುಬಂದದ್ದು ರಾಜ್ಯ ತಂಡದ ಬವಿಷ್ಯ ದ ದೃಷ್ಟಿಯಿಂದ ಸಂತಸಕರ ಎನಿಸುತ್ತದೆ.

ಆದರೆ ಒಂದು ಮಾತಂತೂ ಸತ್ಯ, ಏಷ್ಯನ್ ಸಬ್ ಕಾಂಟಿನೆಂಟಲ್‌ನಲ್ಲಿ ನಡೆಯುವ ಕ್ರಿಕೆಟ್ ಪಂದ್ಯದಲ್ಲಿ ಗೆಲುವುಸಾಧಿಸಬೇಕು ಅಂತಾದರೆ ತಂಡದಲ್ಲಿ ಒಬ್ಬ ಪ್ರಮುಖ ಸ್ಪಿನ್ನರ್ ಇರಲೇ ಬೇಕು. ಆದರೆ ದುರದೃಷ್ಟಕರ ಸಂಗತಿ ಎಂದರೆ ಚಂದ್ರ, ಪ್ರಸನ್ನ, ಕುಂಬ್ಳೆ ಹಾಗೂ ಜೋಷಿ ಮುಂತಾದ ವಿಖ್ಯಾತರು ಆಡಿರುವ ತಂಡದಲ್ಲಿ ಇಂದು ಒಬ್ಬನೇ ಒಬ್ಬ ಹೇಳಿಕೊಳ್ಳುವಂತಹ ಸ್ಪಿನ್ನರ್ ಇಲ್ಲ. ಶುಭಾಂಗ ಹೆಗಡೆ, ಹಾರ್ಧಿಕ ರಾಜ್ ಹಾಗೂ ಶಶಿಕುಮಾರ್ ಮುಂತಾದವರ ಪ್ರಯೋಗ ಅಷ್ಟೊಂದು ಫಲಕಾರಿ ಎನಿಸಲಿಲ್ಲ. ಇವೆಲ್ಲದರ ನಡುವೆ ವಿದರ್ಭದ ವಿರುದ್ದ ಪಂದ್ಯದಲ್ಲಿ ನಾಣ್ಯ ಚಿಮ್ಮುಗೆಯನ್ನು ಗೆದ್ದು ಬ್ಯಾಟಿಂಗ್‌ ಬದಲು ಬೌಲಿಂಗ್ ಆಯ್ದುಕೊಂಡ ನಿರ್ಣಯ ನಿಜಕ್ಕೂ ಮಿಲಿಯನ್ ಡಾಲರ್ ಪ್ರಶ್ನೆ ಎನಿಸುತ್ತದೆ.

ಏನೆ ಇರಲಿ ಆಗಿದ್ದನ್ನು ಮರೆತು, ತಪ್ಪುಗಳನ್ನು ತಿದ್ದಿಕೊಂಡು, ಮುಂದಿನ ಸೀಸನ್ ನಲ್ಲಿಯಾದರೂ ನಮ್ಮ ರಾಜ್ಯದ ಕ್ರಿಕೆಟ್ ತಂಡ ಹೊಸ ಬರವಸೆ, ವಿಶ್ವಾಸ, ಛಲದೊಂದಿಗೆ ಮೈದಾನಕ್ಕಿಳಿದು, ಅಭಿಮಾನಿಗಳ ಆಶೋತ್ತರ ಇಡೇರಿಸುವಂತಾಗಲಿ…

ಟಿ.ಜಿ.ಹೆಗಡೆ, ಮಾಜಿ ಕ್ರಿಕೆಟಿಗರು, ಮಾಗೋಡು