ಟೀಮ್ ಇಂಡಿಯಾಕ್ಕೆ ಡಬಲ್ ಶಾಕ್: ಟೆಸ್ಟ್​ನಿಂದ ಶಮಿ, ಏಕದಿನದಿಂದ ದೀಪಕ್ ಚಹರ್ ಔಟ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ಇಂಡೋ-ಆಫ್ರಿಕಾ ನಡುವೆ ಭಾನುವಾರದಂದು (ಡಿ. 17) ಮೊದಲ ಏಕದಿನ ಪಂದ್ಯ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹೀಗಿರುವಾಗ ಭಾರತದ ವೇಗದ ಬೌಲರ್ ದೀಪಕ್ ಚಹರ್ ಏಕದಿನ ಸರಣಿಯಿಂದ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಇದೇ ವೇಳೆ ಮೊಹಮ್ಮದ್ ಶಮಿ ಕೂಡ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಶಮಿ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ, ಹಾಗಾಗಿ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ದೀಪಕ್ ಚಹರ್ ಅವರು ಡಿಸೆಂಬರ್ 17 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ತಂಡದ ಭಾಗವಾಗಿದ್ದರು. ಆದರೆ ಕುಟುಂಬದಲ್ಲಿ ವೈದ್ಯಕೀಯ ತುರ್ತುಸ್ಥಿತಿಯ ಕಾರಣ, ಅವರು ಸರಣಿಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡರು. ಬಿಸಿಸಿಐ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ದೀಪಕ್ ಚಹರ್ ಬದಲಿಗೆ ಐಪಿಎಲ್​ನಲ್ಲಿ ಆರ್​ಸಿಬಿ ಪರ ಮಿಂಚಿದ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಡಿಸೆಂಬರ್ 26 ರಿಂದ ಪ್ರಾರಂಭವಾಗುವ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಿಂದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಹೊರಗುಳಿದಿದ್ದಾರೆ. ಬಿಸಿಸಿಐ ಹೇಳುವ ಪ್ರಕಾರ, ಶಮಿ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ ಹೀಗಾಗಿ ಈ ಪಂದ್ಯದಲ್ಲಿ ಆಡುವುದಿಲ್ಲ. ನವೆಂಬರ್ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿತ್ತು. ಆಗ ಮೊಹಮ್ಮದ್ ಶಮಿ ಅವರ ಆಯ್ಕೆಯು ಅವರ ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿತ್ತು.

ಮೊಹಮ್ಮದ್ ಶಮಿ ಪಾದದ ನೋವಿನಿಂದ ಬಳಲುತ್ತಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಇವರಿಗೆ ನೋವು ಕಾಣಿಸಿಕೊಂಡಿತ್ತು. ನೋವಿನ ನಡುವೆಯೂ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ, ಶಮಿ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಇದರಿಂದಾಗಿ ಅವರು ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಶಮಿ ಅವರ ಜಾಗಕ್ಕೆ ಬದಲಿ ಆಟಗಾರನ ಘೋಷಣೆ ಮಾಡಿಲ್ಲ. ಪ್ರಸಿದ್ಧ್ ಕೃಷ್ಣ ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.