ಸಿದ್ದಾಪುರ: ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ವಿವಿದೆಡೆ ಹಾನಿಯಾಗಿದ್ದಲ್ಲದೇ ರೈತರ ಬೆಳೆಗಳು ಕೊಳೆಯುವ ಭೀತಿ ಎದುರಾಗಿದೆ. ಭಾನುವಾರ ಮಧ್ಯಾಹ್ನದಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ. ಭತ್ತದ ನಾಟಿ ಕಾರ್ಯ ಕೆಲವೆಡೆ ಬಾಕಿಯಿದ್ದು, ಗದ್ದೆಗಳಲ್ಲಿ ನೀರು ತುಂಬಿ ನಾಟಿ ಮಾಡಲು ತೊಂದರೆಯಾಗಿದೆ.
ಇನ್ನು ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಹೊಂಡಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಭಾನುವಾರ ಹಾಗೂ ಸೋಮವಾರ ಸಿದ್ದಾಪುರದಲ್ಲಿ 180 ಮಿಲಿ ಮೀಟರಗೂ ಅಧಿಕ ಮಳೆಯಾಗಿದೆ. ವಿವಿದೆಡೆೆ ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮ ಕಂಬಗಳು ಮುರಿದು ಬಿದ್ದಿದ್ದು, ಕರೆಂಟ್ ಸಂಪರ್ಕ ಕಡಿತಗೊಂಡಿದೆ.
ಅಬ್ಬರಿಸಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಗೋಡೆ ಕುಸಿದು ಹಾನಿಯಾದ ಘಟನೆ ತಾಲೂಕಿನ ತಾರಖಂಡ ಗ್ರಾಮದಲ್ಲಿ ನಡೆದಿದೆ. ಮಳಿಕೈನ ಲಕ್ಷ್ಮಣ ಬಂಗಾರ್ಯ ಮಡಿವಾಳ ಎಂಬುವರ ಮನೆಯ ಮೇಲ್ಚಾವಣಿ ಗಾಳಿಯ ಆರ್ಭಟಕ್ಕೆ ಮುರಿದು ಬಿದ್ದು ಅಂದಾಜು 15 ಸಾವಿರ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಯಶವಂತ ಅಪ್ಪಿನಬೈಲ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಾವ್ಯ. ವಿ.ಆರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅದಲ್ಲದೇ ವಿಪರೀತ ಗಾಳಿಯಿಂದಾಗಿ ಗೋಳಿಕೈ ಗ್ರಾಮದ ನಿವಾಸಿ ಪುಟ್ಟ ಗಿರಿಯ ನಾಯ್ಕ ಮನೆಯ ಮೇಲೆ ತೆಂಗಿನ ಮರ ಬಿದ್ದು ಅಂದಾಜು 5000 ಹಾನಿಯಾಗಿದೆ.