ದಾಂಡೇಲಿ: ನಮ್ಮ ದೇಶ ಹಲವಾರು ಮಹನೀಯರ ಪ್ರಾಣತ್ಯಾಗದ ಭಾಗವಾಗಿ ಸ್ವಾತಂತ್ರ್ಯವನ್ನು ಗಳಿಸಿ ಇಂದಿಗೆ 75 ವರ್ಷ ಗಳಾಗುತ್ತಿವೆ. ಈ ಸಂದರ್ಭದಲ್ಲಿ ದೇಶದೆಲ್ಲೆಡೆ ಸ್ವಾತಂತ್ರೋತ್ಸವವನ್ನು ವಿಶೇಷ ರೀತಿ ಆಚರಿಸುವುದು ಸ್ವಾಗತಾರ್ಹವಾದರೂ, ಅಂದು ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೇ ಇದ್ದವರು, ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರವನ್ನು ಬರೆದು ಕೊಟ್ಟವರು, ಸರಿ ಸುಮಾರು ಐವತ್ತು ವರ್ಷಗಳ ಕಾಲ ರಾಷ್ಟ್ರಧ್ವಜವನ್ನು ಹಾರಿಸದವರು ಇಂದು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಎನ್ನುತ್ತ ಹರ್ ಘರ್ ತಿರಂಗಾ ಎಂದು ಘೋಷಣೆ ಹಾಕುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ ಎಂದು ಸಿಪಿಐ ಎಂ ನ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ತಿಳಿಸಿದರು.
ದಾಂಡೇಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಅಂದು ಕಮ್ಯುನಿಸ್ಟ್ ಚಳವಳಿಯಲ್ಲಿರುವ ಸಾಕಷ್ಟು ಜನರು ಭಾಗವಹಿಸಿದ್ದರು. ಜೈಲು ಶಿಕ್ಷೆ ಅನುಭವಿಸಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗವನ್ನು ಮಾಡಿದ್ದರು. ಅವರೆಲ್ಲರಾದಿಯಾಗಿ ನಾವು ಮಹಾತ್ಮಗಾಂಧಿ, ನೆಹರೂ ಭಗತ್ ಸಿಂಗ್, ಅಂಥವರನ್ನು ಜೊತೆಯಲ್ಲಿ ಎಲ್ಲ ಯೋಧರನ್ನು ನೆನೆಯುತ್ತೇವೆ. ಆದರೆ ಇಂದು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿಯೂ ಕೂಡ ಅವರ ಪ್ರಚಾರ ಪತ್ರಗಳಲ್ಲಿ, ಆಮಂತ್ರಣ ಪತ್ರಿಕೆಗಳಲ್ಲಿ ಮಹಾತ್ಮ ಗಾಂಧಿಯ ಭಾವಚಿತ್ರವನ್ನು ಮುದ್ರಿಸದಿರುವುದು ನಿಜಕ್ಕೂ ದೇಶಕ್ಕೆ ಹಾಗೂ ಈ ದೇಶದ ಸ್ವಾತಂತ್ರ್ಯ ಯೋಧರಿಗೆ ಮಾಡಿದ ಅಪಚಾರವಾಗುತ್ತದೆ. ಇಂತಹ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಕಮ್ಯುನಿಸ್ಟ್ ಪಕ್ಷ ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಹಾಗೂ ಅದರ ಮುನ್ನಾದಿನ ಆಗಸ್ಟ್ 14 ರಂದು ವಿಶೇಷ ಕಾರ್ಯಕ್ರಮಗಳನ್ನು ಆಚರಿಸುತ್ತಾ ದೇಶದ ಸಮಗ್ರತೆಗಾಗಿ ಒತ್ತಾಯಿಸುತ್ತಾ ಬಂದಿದೆ ಈ ವರ್ಷ ಕೂಡ ಸ್ವಾತಂತ್ರ್ಯ ಉತ್ಸವದ ಭಾಗವಾಗಿ ಆಗಸ್ಟ್ 14 ರಂದು ರಾಜ್ಯ ಮತ್ತು ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ವಿಶೇಷ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸೌಹಾರ್ದ ದೇಶಕ್ಕಾಗಿ ಒತ್ತಾಯಿಸಲಾಗುತ್ತದೆ ಎಂದರು.
ಪ್ರಮುಖರಾದ ಸಲಿಂ ಸಯ್ಯದ್, ರತ್ನದೀಪಾ ಎನ್. ಎಮ್. ಇಮ್ರಾನ್ ಖಾನ್, ವಿಠ್ಠಲ ರೇಣಕೆ ಮುಂತಾದವರು ಉಪಸ್ಥಿತರಿದ್ದರು.