ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಗೆ 800 ಮನೆಗಳಿಗೆ ನುಗ್ಗಿದ ನೀರು.! ಉಸ್ತುವಾರಿ ಸಚಿವರಿಗೆ ಶಾಸಕ ಕಂಪ್ಲೈಂಟ್.!

ಭಟ್ಜಳ : ಪಟ್ಟಣದ ಮಣ್ಕುಳಿ ಮೂಡಭಟ್ಕಳ ಭಾಗದಲ್ಲಿ ಹೆದ್ದಾರಿ ಪ್ರಾಧಿಕಾರದವರು ಸಮರ್ಪಕ ಚರಂಡಿ ನಿರ್ಮಾಣ ಮಾಡದ ಕಾರಣ ಇಂದು ಪಟ್ಟಣದ 800 ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೆ ಐ.ಆರ್.ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ನೇರ ಹೊಣೆಗಾರರು ಎಂದು ಭಟ್ಕಳ ಶಾಸಕ ಸುನೀಲ್ ನಾಯ್ಕ್ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಜೊತೆ ಮಣ್ಕುಳಿ ಭಾಗದಲ್ಲಿ ನೆರೆಹಾನಿ ವೀಕ್ಷಣೆ ಮಾಡಿ ಸುನಿಲ್ ನಾಯ್ಕ್ ಮಾತನಾಡಿದರು.

ವೆಂಕಟಾಪುರ ಭಾಗದಲ್ಲಿ ಮಾಡಿರುವ ಚರಂಡಿ ಕಾಮಗಾರಿಯನ್ನು ಈ ಭಾಗದಲ್ಲಿ ಮಾಡಬೇಕು.  ಪ್ರತಿ ವರ್ಷ ಇಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಕಳೆದ ಅಗಷ್ಟ 2 ರಂದು ನೆರೆ ಬಂದಾಗ ಇಲ್ಲಿ ಆಳೆತ್ತರದ ನೀರು ನಿಂತಿರುವುದನ್ನು ನಾನು ಕೂಡ ನೋಡಿದ್ದೇನೆ. ಹೀಗಾಗಿ ಕೂಡಲೇ ಈ ಭಾಗದಲ್ಲಿ ಸಮರ್ಪಕ ಚರಂಡಿ ಮಾಡುವಂತೆ ಸಚಿವರಲ್ಲಿ ನಿವೇದಿಸಿಕೊಂಡರು.

ಸ್ಥಳೀಯರಾದ ರಾಮನಾಥ ಬಳೆಗಾರ ಹಾಗೂ ಸತೀಶಕುಮಾರ ನಾಯ್ಕ ಸಚಿವರಿಗೆ ಇಲ್ಲಿನ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಸ್ಥಳದಲ್ಲಿ ಹಾಜರಿದ್ದ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಲಿಂಗೆಗೌಡ ಮಾತನಾಡಿ ಚರಂಡಿ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಆದರೆ ಇಲ್ಲಿ ರಸ್ತೆ ನಿರ್ಮಿಸಲು ಮಾಲ್ಕಿ ಜಮೀನಿನವರು ಸ್ಥಳ ಬಿಟ್ಟುಕೊಡದ ಕಾರಣ  ಕೆಲಸ ಮಾಡಲು ಸಾಧ್ಯವಾಗುತ್ತೀಲ್ಲ  ಎಂದರು.

ಶಾಸಕರು ಇದಕ್ಕೆ ಪ್ರತಿಕ್ರಯಿಸಿ ನನ್ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಮಾಡಿ ಸ್ಥಳೀಯರ ಮನವೊಲಿಸಿ ಜಾಗ ಬಿಟ್ಟುಕೊಡಲಾಗುವುದು. ಐ.ಆರ್.ಬಿಯವರು ಶೀಘ್ರದಲ್ಲಿ ಚರಂಡಿ ನಿರ್ಮಿಸುವಂತೆ ಸೂಚಿಸಲು ಸಚಿವರಿಗೆ ತಿಳಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಲಿಂಗೆಗೌಡ ಐ.ಆರ್.ಬಿ ಅಧಿಕಾರಿ ಶ್ರೀನಿವಾಸ ಅವರಿಗೆ ಮಳೆ ಮುಗಿದ ಮೇಲೆ ಮಣ್ಕುಳಿಯಿಂದ ಮೂಡಭಟ್ಕಳ ನದಿಯ ತನಕ ಚರಂಡಿ ನಿರ್ಮಿಸುವಂತೆ ಸೂಚಿಸಿದರು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೂಡ ಅವರಿಗೆ ಆದೇಶ ನೀಡಿ ಕೂಡಲೇ ಈ ಕೆಲಸ ಮಾಡಿ ಮುಗಿಸುವಂತೆ ಸೂಚಿಸಿದರು. 

ಉಪವಿಭಾಗಾಧಿಕಾರಿ ಮಮತಾ ದೇವಿ, ತಹಶೀಲ್ದಾರ ಬಿ ಸುಮಂತ, ಮುಖ್ಯಾಧಿಕಾರಿ ಎಂ.ಕೆ. ಸುರೇಶ, ಸ್ಥಳೀಯರು ಇದ್ದರು.