ಹಿಮಾಚಲ ಪ್ರದೇಶ: ಚಂಬಾ ಜಿಲ್ಲೆಯ ಎರಡು ಪ್ರದೇಶಗಳಲ್ಲಿ ಸೋಮವಾರ ಮೇಘಸ್ಫೋಟ ಸಂಭವಿಸಿದ್ದು, ಓರ್ವ ಬಾಲಕ ಮೃತಪಟ್ಟಿದ್ದಾನೆ. ವಿಜಯ್ ಕುಮಾರ್ (15) ಮೃತಪಟ್ಟ ಬಾಲಕವಾಗಿದ್ದಾನೆ. ಹಲವರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಭದೋಗ ಮತ್ತು ಕಂಧ್ವಾರ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಉಂಟಾದ ಮೇಘಸ್ಫೋಟದಿಂದ ದಿಢೀರ್ ಮಳೆ ಸುರಿದಿದೆ ಎಂದು ಚಂಬಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಕಂಧ್ವಾರ ಗ್ರಾಮದಲ್ಲಿ ಸೇತುವೆಯೊಂದಕ್ಕೆ ಮತ್ತು ಕೃಷಿ ಭೂಮಿಗೆ ಹಾನಿಯಾಗಿದೆ ಎಂದು ಇಲಾಖೆ ತಿಳಿಸಿದೆ. ಸಮೀಪದ ಗುಲೆಲ್ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ಐದು ಮನೆಗಳಿಗೆ ಹಾನಿಯಾಗಿದೆ.