ಕಾರವಾರ: ದಾಂಡೇಲಿಯ ಹೋಂ ಸ್ಟೇ ಮಾಲಕರು ಶಿರಸಿಯಿಂದ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರವಾರದಲ್ಲಿ ಕಾರನ್ನು ತಡೆದು 50 ಸಾವಿರ ರೂ. ಬೆಲೆಯ ಗಾಂಜಾವನ್ನು ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರೆಲ್ಲರೂ ದಾಂಡೇಲಿಯವರಾಗಿದ್ದಾರೆ. ದಾಂಡೇಲಿ ಜಂಗಲ್ ರೆಸಿಡೆನ್ಸಿ ಮಾಲಕನಾದ ದಾಂಡೇಲಿ ತಾಲೂಕಿನ ಸುಭಾಷ ನಗರದ ಅಂಜನಿಕುಮಾರ ಶಾಂತಾರಾಮ ಪಟ್ಟಿಕೇರಿ, ದಾಂಡೇಲಿಯ ಜಂಗಲ್ ನೈಟ್ ಹೋಂ ಸ್ಟೇ ಮಾಲಕ ಪವನಕುಮಾರ ಮಾದೇವ ಕೊನ್ನೂರು, ದಾಂಡೇಲಿ ನಿರ್ಮಲ ನಗರದ ಯೋಗೇಶಕುಮಾರ ಚಂದ್ರಸಿಂಗ್ ರಜಪೂತ್ ಹಾಗೂ ವಾಹನ ಚಾಲಕ ಹಳೆದಾಂಡೇಲಿಯ ಬಸಯ್ಯ ಬಸವರಾಜ ದೆಗಲೊಳ್ಳಿಮಠ ಬಂಧಿತ ಆರೋಪಿಗಳಾಗಿದ್ದಾರೆ.
ಇವರೆಲ್ಲರೂ ಸೇರಿ ಕಾರಿನಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದಾರೆ ಎಂಬ ಬಗ್ಗೆ ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಉಪ ನಿರೀಕ್ಷಕ ಪ್ರೇಮನಗೌಡ ಪಾಟೀಲ ಅವರಿಗೆ ಮಾಹಿತಿ ದೊರೆತಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಅವರು ಡಿವೈಎಸ್‌ಪಿ ವೆಲಂಟಿನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ನಗರದ ಲಂಡನ್ ಸೇತುವೆ ಬಳಿ ಕಾರ್ಯಾಚರಣೆ ನಡೆಸಿದ್ದಾರೆ.
ವಾಹನವನ್ನು ತಡೆದು ತಪಾಸಣೆ ನಡೆಸಿದಾಗ 50 ಸಾವಿರ ರೂ. ಮೌಲ್ಯದ 1.99 ಕೆಜಿ ತೂಕದ ಗಾಂಜಾ ಪತ್ಯೆಯಾಗಿದೆ. ತಕ್ಷಣ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಹನುಮಂತರೆಡ್ಡಿ ರಡ್ಡೇರ, ಸಂತೋಷ, ಭಗವಾನ ಗಾಂವಕರ, ವಿರೇಶ ನಾಯ್ಕ ಪಾಲ್ಗೊಂಡಿದ್ದರು.
ಇನ್ನು ಈ ಪ್ರಕರಣದಲ್ಲಿ ಬಂಧಿತರಾದ ಇಬ್ಬರು ಆರೋಪಿಗಳು ದಾಂಡೇಲಿಯ ಹೋಂ ಸ್ಟೇಗಳ ಮಾಲಕರಾಗಿರುವ ಹಿನ್ನೆಲೆಯಲ್ಲಿ ಅವರ ಹೋಂ ಸ್ಟೇಗಳ ಲೈಸನ್ಸ್ ರದ್ದು ಮಾಡಲು ಕ್ರಮ ವಹಿಸಲಾಗಿದೆ ಎಂದು ಎಸ್‌ಪಿ ಡಾ. ಸುಮನ್ ಪನ್ನೇಕರ ತಿಳಿಸಿದ್ದಾರೆ.